ಬ್ರಹ್ಮಾಂಡ ರೂಪ ತಾಳುತ್ತಿರುವ ಭೂ ವಿವಾದ : ಸತೀಶ್ ಕುಮಾರ್
ಕಾನೂನು ಅರಿವು ಕಾರ್ಯಾಗಾರ
.jpg)
ಸಾಗರ, ಜು.17: ಭೂಮಿ ಎಂದ ತಕ್ಷಣ ಎಲ್ಲರಲ್ಲೂ ಆಸಕ್ತಿ ಮೂಡುತ್ತದೆ. ಪ್ರತಿಯೊಬ್ಬರಿಗೂ ಒಂದು ಇಂಚು ಭೂಮಿ ಹೊಂದಬೇಕು ಎನ್ನುವ ಆಕಾಂಕ್ಷೆ ಇರುತ್ತದೆ ಎಂದು ಉಪವಿಭಾಗಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಹೇಳಿದರು. ಇಲ್ಲಿನ ಅಜಿತ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ರವಿವಾರ ಭೂವಿವಾದ-ಬಗರ್‌ಹುಕುಂ ಸಾಗುವಳಿ ಸಮಸ್ಯೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬದಲಾದ ದಿನಮಾನಗಳಲ್ಲಿ ಭೂ ವಿವಾದ ಬ್ರಹ್ಮಾಂಡ ರೂಪವನ್ನು ತಾಳುತ್ತಿದೆ. ತಂದೆ-ಮಗ, ಅಣ್ಣ-ತಮ್ಮ, ದಾಯಾದಿಗಳು, ಸರಕಾರ ಹಾಗೂ ಜನರ ನಡುವೆ ಕಂದಕ ಸೃಷ್ಟಿಸುತ್ತಿದೆ. ಭೂ ವಿವಾದದಿಂದ ಅನೇಕ ಗೊಂದಲಗಳು ಸಮಾಜದಲ್ಲಿ ನಿರ್ಮಾಣವಾಗುತ್ತಿದೆ. ಗ್ರಾಮಲೆಕ್ಕಿಗರಿಂದ ಹಿಡಿದು ಜಿಲ್ಲಾಧಿಕಾರಿಗಳವರೆಗೂ ಭೂ ವಿವಾದದ ಕಡತ ಹರಿದಾಡುತ್ತಾ ಇರುತ್ತವೆ ಎಂದರು. ಹಿಂದೆ ಭೂಸುಧಾರಣೆ ಕುಟುಂಬವೊಂದು 10 ಯೂನಿಟ್‌ಗಿಂತ ಹೆಚ್ಚಿನ ಜಮೀನು ಹೊಂದುವಂತಿರಲಿಲ್ಲ. ಬದಲಾದ ಕಂದಾಯ ಕಾಯ್ದೆಯಡಿ 4.63ಎಕರೆ ಜಮೀನು ಹೊಂದಲು ಮಾತ್ರ ಅವಕಾಶವಿದೆ. ಜಮೀನು ಹೊಂದಿರುವ ಪ್ರತಿಯೊಬ್ಬರೂ ಕಂದಾಯ ಕಾಯ್ದೆಯ ಬಗ್ಗೆ ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕು. ತಾಲೂಕು ವ್ಯಾಪ್ತಿಯಲ್ಲಿ ಇಂತಹ ಕಾರ್ಯಾಗಾರ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು. ಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯಲ್ಲಿ ಇತರೆ ಎಲ್ಲ ಪ್ರಕರಣಗಳಿಗಿಂತ ಭೂ ವಿವಾದಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚು ಇದೆ. ಜಿಲ್ಲಾ ರಕ್ಷಣಾಧಿಕಾರಿಗಳ ಸೂಚನೆಯಂತೆ ಈ ಕಾರ್ಯಾಗಾರದ ಮೂಲಕ ಭೂ ವಿವಾದ ಕುರಿತು ಅಗತ್ಯ ಮಾಹಿತಿ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೌಟುಂಬಿಕ ಕಲಹ, ಹಲ್ಲೆ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಪೊಲೀಸ್ ಇಲಾಖೆಗೆ ಕಾನೂನಿನಡಿ ಅವಕಾಶವಿರುತ್ತದೆ. ಆದರೆ ಭೂವಿವಾದ ಬಗೆಹರಿಸುವ ಅವಕಾಶ ಪೊಲೀಸ್ ಇಲಾಖೆಗೆ ಕಡಿಮೆ ಇರುತ್ತದೆ ಎಂದರು. ವೇದಿಕೆಯಲ್ಲಿ ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಪ್ರಸಾದಿನಿ, ಶಿವಮೊಗ್ಗ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಪ್ರಾಣೇಶ್, ನ್ಯಾಯವಾದಿ ದೇವರಾಜ್, ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ವೃತ್ತ ನಿರೀಕ್ಷಕರಾದ ಗಂಗಾಧರಪ್ಪ, ಚಂದ್ರಪ್ಪ, ಪಿಎಸ್ಸೈ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.





