ಸರಕಾರಿ ಅಭಿವೃದ್ಧಿ ಕಾರ್ಯಗಳು ನಿರಂತರ: ತೂಗುಸೇತುವೆ ಉದ್ಘಾಟಿಸಿ ಸಚಿವ ದೇಶಪಾಂಡೆ

ಹೊನ್ನಾವರ, ಜು.17: ಜನರಿಗೆ ಅನುಕೂಲ ಕಲ್ಪಿಸುವ ಅಭಿವೃದ್ಧಿ ಕಾರ್ಯಗಳು ಸದಾ ನಡೆಯುತ್ತಿರಬೇಕೆಂಬುದು ಸರಕಾರ ಉದ್ದೇಶವಾಗಿದ್ದು ಯಾವುದೇ ಜಾತಿ ಧರ್ಮದ ಭೇದವೆಣಿಸದೆ ಕಾಮಗಾರಿಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ತಾಲೂಕಿನ ಕುದ್ರಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪೋಣಿ ಹಾಗೂ ಕುದ್ರಗಿ ನಡುವೆ ಸಂಪರ್ಕ ಕಲ್ಪಿಸುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನೀಡಿದ ರೂ. 2.78 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ಶರಾವತಿ ತೂಗು ಸೇತುವೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕುದ್ರಗಿಯಲ್ಲಿ ಪಿಯು ಕಾಲೇಜ್ ನಿರ್ಮಾಣ ಸರಕಾರದ ಪರಿಶೀಲನೆಯಲ್ಲಿದ್ದು, ಅಲ್ಲಿ ಆಸ್ಪತ್ರೆ ನಿರ್ಮಾಣದ ಪ್ರಸ್ತಾವನೆ ಸಿದ್ಧವಾಗಿದೆ. ಸರಕಾರ ಬಡವರು, ಅಲ್ಪಸಂಖ್ಯಾತರು ಹಾಗೂ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಭಟ್ಕಳ ಕ್ಷೇತ್ರ ಒಂದಕ್ಕೇ ಪ್ರವಾಸೋದ್ಯಮ ಇಲಾಖೆಯಿಂದ ರೂ. 40 ಕೋ. ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಂಕಾಳ ಎಸ್. ವೈದ್ಯ, ಬಹಳಷ್ಟು ವಿಸ್ತೀರ್ಣವಾಗಿರುವ ಭಟ್ಕಳ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಇನ್ನೂ ಬಾಕಿ ಇವೆ. ಸರಕಾರ ಈ ನಿಟ್ಟಿನಲ್ಲಿ ಸ್ಪಂದಿಸುತ್ತಿದೆ. ರಾವಳಿ ಅಭಿವೃದ್ಧಿ ಪ್ರಾಧಿಕಾರ ಸುಮಾರು ಶೇ. 25 ಅನುದಾನವನ್ನು ಈ ಕ್ಷೇತ್ರಕ್ಕೆ ನೀಡಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಮಾತನಾಡಿ, ಪ್ರಾಧಿಕಾರದ ಅನುದಾನದಲ್ಲಿ ಅಗತ್ಯವಿರುವ ಪ್ರದೇಶಗಳನ್ನು ಖುದ್ದು ಪರಿಶೀಲಿಸಿ ಅಲ್ಲಿ ತೂಗು ಸೇತುವೆ, ಕಾಲುಸಂಕ, ಮೀನು ಮಾರುಕಟ್ಟೆ ಮೊದಲಾದವುಗಳ ನಿರ್ಮಾಣ ಮಾಡಲಾಗುವುದು . ನೂರಾರು ತೂಗು ಸೇತುವೆಗಳ ನಿರ್ಮಾಣದ ನೇತೃತ್ವ ವಹಿಸಿದ ಗಿರೀಶ ಭಾರದ್ವಾಜ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಅವರು ಸಚಿವರನ್ನು ಒತ್ತಾಯಿಸಿದರು. ಶರಾವತಿ ಸೇತುವೆಯ ನಿರ್ಮಾಣದ ಉಸ್ತುವಾರಿ ವಹಿ ಸಿದ ಗಿರೀಶ ಭಾರದ್ವಾಜ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಸೇತುವೆಯನ್ನು ಉಪಯೋಗಿಸುವಾಗ ಅಲ್ಲಿ ಬರೆದಿರುವ ಸೂಚನೆಯನ್ನು ತಪ್ಪದೆ ಪಾಲಿಸಬೇಕು ಎಂದು ಸಲಹೆ ನೀಡಿದರು.
ಮಾತನಾಡಿ ಸೇತುವೆ ನಿರ್ಮಿಸಿದ ಪ್ರಾಧಿಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕು ಪಂಚಾಯತ್ ಅಧ್ಯಕ್ಷ ಅಣ್ಣಯ್ಯ ನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ, ಪುಷ್ಪಾ ನಾಯ್ಕ, ಸವಿತಾ ಗೌಡ, ದೀಪಕ ನಾಯ್ಕ, ಜಗದೀಪ ತೆಂಗೇರಿ, ಕುದ್ರಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಈಶ್ವರ ನಾಯ್ಕ, ಪ್ರಮುಖರಾದ ಶಂಭು ಗೌಡ, ಮುಝಮ್ಮಿಲ್ ಖಾಝಿಯಾ, ಉಮೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಪದ್ಮಾ ಹಳ್ಳೇರ ಪ್ರಾರ್ಥನಾ ಗೀತೆ ಹಾಡಿದರು. ಪ್ರದೀಪ ಡಿಸೋಜಾ ಸ್ವಾಗತಿಸಿದರು.







