ಮೆಡಿಕಲ್ ಕಾಲೇಜು ವಿದ್ಯಾರ್ಥಿಯ ನಿಗೂಢ ಸಾವು!
ಶಿವಮೊಗ್ಗ, ಜು.17: ನಗರದ ವಿದ್ಯಾನಗರ ಬಡಾವಣೆಯ ರೈಲ್ವೆ ಹಳಿಯ ಬಳಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೋರ್ವನ ಮೃತದೇಹ ಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ವಿದ್ಯಾರ್ಥಿಯ ಸಾವಿನ ಸುತ್ತ ಅನುಮಾನದ ಶಂಕೆ ಉಂಟಾಗಿದೆ. ಆತ್ಮಹತ್ಯೆಯೋ, ಆಕಸ್ಮಿಕವೋ, ಕೊಲೆಯೋ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶರತ್‌ಕುಮಾರ್ (20) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಶನಿವಾರ ಸಂಜೆ ರೈಲ್ವೆ ಹಳಿಯಲ್ಲಿ ಮೃತದೇಹ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈಲ್ವೆ ಪೊಲೀಸರು ಪಂಚನಾಮೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ. ರವಿವಾರ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣದಡಿ ಕೇಸ್ ದಾಖಲಾಗಿದೆ. ಪೊಲೀಸರ ತನಿಖೆಯ ನಂತರ ವಷ್ಟೇ ವಿದ್ಯಾರ್ಥಿಯ ಸಾವಿಗೆ ಸ್ಪಷ್ಟ ಕಾರಣ ವೆನೆಂಬುವುದು ತಿಳಿಯಬೇಕಾಗಿದೆ. ನಿಗೂಢ: ಮೃತ ಶರತ್ ಕುಮಾರ್ ನಗರದ ಹೊಳೆಹೊನ್ನೂರು ರಸ್ತೆಯಲ್ಲಿರುವ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಎರಡನೆ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ಈತನ ತಲೆಯ ಹಿಂಭಾಗದಲ್ಲಿ ಗಾಯವಾಗಿದೆ. ಉಳಿದಂತೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ. ಒಂದು ವೇಳೆ ಚಲಿಸುವ ರೈಲಿಗೆ ಸಿಲುಕಿ ಮೃತಪಟ್ಟಿದ್ದರೆ ದೇಹದಲ್ಲಿ ಗಂಭೀರ ಸ್ವರೂಪದ ಗಾಯಗಳು ಉಂಟಾಗಬೇಕಾಗಿತ್ತು. ಆದರೆ ಮೇಲ್ನೋಟಕ್ಕೆ ಚಲಿಸುವ ರೈಲಿಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಕಡಿಮೆಯಿದೆ ಎಂದು ಕೆಲ ಸಹಪಾಠಿಗಳು ಅಭಿಪ್ರಾಯ ಪಡುತ್ತಾರೆ. ಶರತ್‌ಕುಮಾರ್‌ರನ್ನು ಕೊಲೆ ಮಾಡಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ಈ ಪ್ರಕರಣದ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸತ್ಯಾಸತ್ಯತೆ ಬಯಲಿಗೆಳೆಯಬೇಕು ಎಂದು ಕೆಲ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.





