ಜಪಾನ್‌ನಲ್ಲಿ ಭೂಕಂಪ; ಸುನಾಮಿಯ ಭೀತಿಯಿಲ್ಲ
ಟೋಕಿಯೊ, ಜು. 17: ಪೂರ್ವ ಜಪಾನ್‌ನಲ್ಲಿ ರವಿವಾರ ರಿಕ್ಟರ್ ಮಾಪಕದಲ್ಲಿ 5ರಷ್ಟಿದ್ದ ತೀವ್ರತೆಯ ಭೂಕಂಪ ಸಂಭವಿಸಿದ್ದು, ಟೋಕಿಯೊದಲ್ಲಿ ಕಟ್ಟಡಗಳು ನಡುಗಿವೆ ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ, ಸುನಾಮಿಯ ಅಪಾಯ ಎದುರಾಗಿಲ್ಲ.
ಅದೇ ವೇಳೆ, ಭೂಕಂಪದಿಂದ ಆಗಿರಬಹುದಾದ ಸಾವು-ನೋವು, ನಾಶ-ನಷ್ಟಗಳ ಬಗ್ಗೆಯೂ ತಕ್ಷಣಕ್ಕೆ ವರದಿಗಳು ಬಂದಿಲ್ಲ.
ಭೂಕಂಪದ ಕೇಂದ್ರ ಬಿಂದು ಟೋಕಿಯೊದ ಈಶಾನ್ಯಕ್ಕೆ 44 ಕಿ.ಮೀ. ದೂರದಲ್ಲಿ ಹಾಗೂ ಸುಮಾರು 44 ಕಿ.ಮೀ. ಆಳದಲ್ಲಿ ಇತ್ತು ಎಂದು ಯುಎಸ್ ಜಿಯಾಲಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.
ಭೂಕಂಪದ ಬಳಿಕ, 2011ರಿಂದ ಮುಚ್ಚಿರುವ ಟೊಕಾಯ್ ನಂ. 2 ಪರಮಾಣು ವಿದ್ಯುತ್ ಸ್ಥಾವರವನ್ನು ಪರಿಶೀಲಿಸಲಾಯಿತು, ಆದರೆ, ಯಾವುದೇ ಹಾನಿ ಕಂಡುಬಂದಿಲ್ಲ ಎಂದು ಎನ್‌ಎಚ್‌ಕೆ ಟಿವಿ ವರದಿ ಮಾಡಿದೆ.
2011 ಮಾರ್ಚ್ 11ರಂದು ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಸಂಭವಿಸಿದ 9ರ ತೀವ್ರತೆಯ ಭೀಕರ ಭೂಕಂಪವು ಸುನಾಮಿ ಅಲೆಗಳನ್ನು ಸೃಷ್ಟಿಸಿತ್ತು. ಈ ದುರಂತದಲ್ಲಿ ಸುಮಾರು 20,000 ಮಂದಿ ಪ್ರಾಣ ಕಳೆದುಕೊಂಡಿದ್ದರು.





