ಡೇವಿಸ್‌ಕಪ್: ಬೋಪಣ್ಣಗೆ ಜಯ ಕೊರಿಯಾಗೆ ವೈಟ್‌ವಾಶ್ ತಪ್ಪಿಸಿದ ಲಿಮ್
ಚಂಡೀಗಢ, ಜು.17: ಡೇವಿಸ್‌ಕಪ್ ಏಷ್ಯಾ ಒಶಿಯಾನಿಯ ಗ್ರೂಪ್-1 ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಸಿಂಗಲ್ಸ್ ಪಂದ್ಯದಲ್ಲಿ ಜಯಭೇರಿ ಬಾರಿಸಿದರೆ, ಮತ್ತೊಂದು ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್‌ರನ್ನು ಮಣಿಸಿದ ಯೊಂಗ್-ಕೀಯು ಲಿಮ್ ಕೊರಿಯಾ ತಂಡವವನ್ನು ವೈಟ್‌ವಾಶ್‌ನಿಂದ ಪಾರು ಮಾಡಿದರು.
ರವಿವಾರ ನಡೆದ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸಾಕೇತ್ ಮೈನೇನಿ ಬದಲಿಗೆ ಸಿಂಗಲ್ಸ್ ಪಂದ್ಯವನ್ನು ಆಡಿದ ಬೋಪಣ್ಣ ಕೊರಿಯಾದ ಹಾಂಗ್ ಚುಂಗ್‌ರನ್ನು 3-6, 6-4, 6-4 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಕೊಡಗಿನ ಕುವರ ಬೋಪಣ್ಣ 2012ರ ಬಳಿಕ ಡೇವಿಸ್‌ಕಪ್‌ನಲ್ಲಿ ಸಿಂಗಲ್ಸ್ ಪಂದ್ಯ ಆಡಿದ್ದಾರೆ. ಬೋಪಣ್ಣ ಡೇವಿಸ್‌ಕಪ್‌ನಲ್ಲಿ 10ನೆ ಸಿಂಗಲ್ಸ್ ಪಂದ್ಯವನ್ನು ಜಯಿಸಿದ್ದಾರೆ. ಪೇಸ್‌ರೊಂದಿಗೆ ಶನಿವಾರ ಡಬಲ್ಸ್ ಪಂದ್ಯವನ್ನು ಜಯಿಸಿದ್ದ ಬೋಪಣ್ಣ ಭಾರತ ವಿಶ್ವ ಪ್ಲೇ-ಆಫ್‌ಗೆ ತೇರ್ಗಡೆಯಾಗಲು ನೆರವಾಗಿದ್ದರು.
ಡೇವಿಸ್‌ಕಪ್‌ನಲ್ಲಿ 5ನೆ ಸಿಂಗಲ್ಸ್ ಪಂದ್ಯವನ್ನು ಆಡಿದ ಚೆನ್ನೈನ ರಾಮ್‌ಕುಮಾರ್ ಎರಡು ಗಂಟೆಗೂ ಅಧಿಕ ಕಾಲ ನಡೆದ ಪಂದ್ಯದಲ್ಲಿ ತನಗಿಂತ 409 ರ್ಯಾಂಕ್ ಕೆಳಗಿರುವ ಯೊಂಗ್-ಕಿಯು ಲಿಮ್ ವಿರುದ್ಧ 3-6, 6-4, 6-7(2) ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಶುಕ್ರವಾರ ನಡೆದಿದ್ದ ಡೇವಿಸ್‌ಕಪ್‌ನ ಎರಡನೆ ಸಿಂಗಲ್ಸ್ ಪಂದ್ಯದಲ್ಲಿ ಸಾಕೇತ್ ಮೈನೇನಿಗೆ ಶರಣಾಗಿದ್ದ ಆರ್ಮಿಮ್ಯಾನ್ ಲಿಮ್ ನೋವಿನಿಂದ ಚೇತರಿಸಿಕೊಂಡು ರಾಮ್‌ಕುಮಾರ್ ವಿರುದ್ಧ ಪರಿಪೂರ್ಣ ಟೆನಿಸ್ ಆಡಿದರು.
ಈ ಪಂದ್ಯವನ್ನು 1-4 ಅಂತರದಿಂದ ಸೋತ ಹೊರತಾಗಿಯೂ ಕೊರಿಯಾ ತಂಡ ಭಾರತೀಯರಿಗೆ ಕಠಿಣ ಪೈಪೋಟಿ ನೀಡಿತ್ತು. ಇದೀಗ ಭಾರತ ತಂಡ ಮೂರನೆ ಬಾರಿ ಎಲೈಟ್ 16-ನೇಶನ್ ವರ್ಲ್ಡ್ ಗ್ರೂಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಯತ್ನಿಸಲಿದೆ. ಸೆಪ್ಟಂಬರ್‌ನಲ್ಲಿ ನಡೆಯಲಿರುವ ಪಂದ್ಯದ ಎದುರಾಳಿ ಯಾರೆಂದು ತಿಳಿಯಲು ವಿಶ್ವ ಗ್ರೂಪ್ ಪಂದ್ಯಗಳ ಫಲಿತಾಂಶವನ್ನು ಕಾಯಬೇಕಾಗಿದೆ.
ಭಾರತ 2011ರಲ್ಲಿ ಕೊನೆಯ ಬಾರಿ ವಿಶ್ವ ಗ್ರೂಪ್ ಪಂದ್ಯವನ್ನು ಆಡಿದೆ. ಆದರೆ, ಸರ್ಬಿಯ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲುಂಡಿತ್ತು. ಆ ಬಳಿಕ ಸರ್ಬಿಯ(2014, ಬೆಂಗಳೂರು) ಹಾಗೂಝೆಕ್ ಗಣರಾಜ್ಯ(2015, ಹೊಸದಿಲ್ಲಿ) ನಡೆದ ಎರಡೂ ಪ್ಲೆ-ಆಪ್ ಪಂದ್ಯಗಳನ್ನು ಸೋತಿತ್ತು.







