ವೆಸ್ಟ್‌ಇಂಡೀಸ್ ಕ್ರಿಕೆಟ್ ಮ್ಯಾನೇಜರ್ ಆಗಿ ಗಾರ್ನರ್

ಬಾರ್ಬಡೊಸ್, ಜು.17: ಭಾರತ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯ ಟೀಮ್ ಮ್ಯಾನೇಜರ್ ಆಗಿ ವಿಂಡೀಸ್‌ನ ಮಾಜಿ ವೇಗದ ಬೌಲರ್ ಜೊಯೆಲ್ ಗಾರ್ನರ್ ಆಯ್ಕೆಯಾಗಿದ್ದಾರೆ.
63ರ ಹರೆಯದ ಗಾರ್ನರ್ ಮುಂದಿನ ಮೂರು ವರ್ಷಗಳ ಕಾಲ ಇದೇ ಹುದ್ದೆಯಲ್ಲಿರಲಿದ್ದಾರೆ.
ತನ್ನ ಆಯ್ಕೆಗೆ ಸಂತೋಷ ವ್ಯಕ್ತಪಡಿಸಿರುವ ಗಾರ್ನರ್, ಆಟಗಾರರೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
‘‘ವೆಸ್ಟ್‌ಇಂಡೀಸ್ ಕ್ರಿಕೆಟ್‌ನ ಕರೆಗೆ ನಾನು ಯಾವಾಗಲೂ ಓಗೊಡುವೆ. ವೆಸ್ಟ್‌ಇಂಡೀಸ್ ಕ್ರಿಕೆಟ್‌ನಲ್ಲಿ ಯಾವುದೇ ಒಂದು ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ಕೂಡ ಒಂದು ಗೌರವ. ತಂಡದ ಮ್ಯಾನೇಜರ್ ಆಗಿ ತಂಡದೊಂದಿಗೆ ತನ್ನ ಜ್ಞಾನ ಹಾಗೂ ಅನುಭವವನ್ನು ಹಂಚಿಕೊಳ್ಳುವೆ’’ ಎಂದು ವೆಸ್ಟ್‌ಇಂಡೀಸ್‌ನ ಪರ 58 ಟೆಸ್ಟ್ ಹಾಗೂ 98 ಏಕದಿನ ಪಂದ್ಯಗಳನ್ನು ಆಡಿರುವ ಗಾರ್ನರ್ ‘ಇಎಸ್‌ಪಿಎನ್ ಕ್ರಿಕ್‌ಇನ್‌ಫೋಗೆ ತಿಳಿಸಿದ್ದಾರೆ.
ವಿಂಡೀಸ್‌ನ ಮಾಜಿ ಬೌಲರ್ ಗಾರ್ನರ್ 1979ರಲ್ಲಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. 2009 ರಿಂದ 2010ರ ತನಕ ತಂಡದ ಹಂಗಾಮಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. ದೇಶದ ಕ್ರಿಕೆಟ್‌ನಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿರುವ ಗಾರ್ನರ್ ವಿಂಡೀಸ್ ಕ್ರಿಕೆಟ್ ಮಂಡಳಿಯ ಮಂಡಳಿಯ ನಿರ್ದೇಶಕನಾಗಿ, ಬಾರ್ಬಡೊಸ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ವೆಸ್ಟ್‌ಇಂಡೀಸ್ ಎ ತಂಡದ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದರು





