ಡಿವೆಎಸ್ಪಿಗಳ ಆತ್ಮಹತ್ಯೆ ಪ್ರಕರಣ: ನ್ಯಾಯ ಪಾಲನೆಯಲ್ಲಿ ದ್ವಂದ್ವ ಬೇಡ

ಒಂದೆಡೆ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ಬಿಜೆಪಿ ಮತ್ತು ಸಂಘಪರಿವಾರ ಬೀದಿಗಿಳಿದು ರಾದ್ಧಾಂತ ಮಾಡುತ್ತಿರುವ ಸಂದರ್ಭದಲ್ಲೇ ಮಗದೊಂದೆಡೆ ಡಿವೈಎಸ್ಪಿ ಕಲ್ಲಪ್ಪ ಅವರ ಆತ್ಮಹತ್ಯೆಯ ಹಿಂದಿರುವ ಸಂಘಪರಿವಾರದ ನಂಟು ಹೊರ ಬೀಳುತ್ತಿದೆ. ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ನಿಗೂಢ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬಜರಂಗ ದಳದ ಮುಖಂಡ ಪ್ರವೀಣ್ ಖಾಂಡ್ಯನ ಸಹಚರ ಬಜರಂಗದಳದ ರಾಜ್ಯ ಸಮಿತಿ ಸದಸ್ಯ ಬಸವನಹಳ್ಳಿಯ ನಿವಾಸಿ ಪ್ರದೀಪ್ ಎಂಬವನನ್ನು ಈಗಾಗಲೇ ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಬಜರಂಗದಳದ ಮುಖಂಡ ಪ್ರವೀಣ್ ಖಾಂಡ್ಯನ ಬಂಧನಕ್ಕಾಗಿ ರಾಜ್ಯಾದ್ಯಂತ ಬಲೆ ಬೀಸಲಾಗಿದೆ. ಈ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಯ ಕುರಿತಂತೆ ಬಿಜೆಪಿ ಮತ್ತು ಸಂಘಪರಿವಾರ ಪ್ರಾಮಾಣಿಕ ಕಾಳಜಿ ಹೊಂದಿರುವುದು ನಿಜವೇ ಆಗಿದ್ದರೆ, ಖಾಂಡ್ಯನ ಬಂಧನಕ್ಕೆ ಸಂಘಪರಿವಾರ ಸಹಕರಿಸಬೇಕು.
ಬಜರಂಗದಳಕ್ಕೂ ಸಂಘಪರಿವಾರಕ್ಕೂ ಇರುವ ನಂಟೇನು ಎನ್ನುವುದು ಎಲ್ಲರಿಗೂ ತಿಳಿದಿರುವಂತಹದು. ಗಣಪತಿ ಮತ್ತು ಕಲ್ಲಪ್ಪ ಇಬ್ಬರೂ ಒಂದೇ ಹುದ್ದೆಯನ್ನು ಹೊಂದಿದ್ದವರು. ಇಬ್ಬರ ಹಿನ್ನೆಲೆಯನ್ನು ಕೆದಕಿದಾಗಲೂ ಅವರು ಖಾಕಿ ಧರಿಸಿ, ಸಮಾಜಕ್ಕಾಗಿ ತ್ಯಾಗ ಮಾಡಿರುವುದಕ್ಕಿಂತಲೂ ಅದನ್ನು ದುರುಪಯೋಗ ಪಡಿಸಿಕೊಂಡ ವಿಷಯಗಳು ಬಹಿರಂಗವಾಗಿದೆ. ಒಂದು ಬ್ಲಾಕ್‌ಮೇಲ್ ಪ್ರಕರಣದಲ್ಲಿ ಡಿವೈಎಸ್ಪಿ ಕಲ್ಲಪ್ಪ ಅವರನ್ನು ಬಜರಂಗದಳ ನಾಯಕರು ಬಳಸಿಕೊಂಡಿರುವುದು ಮತ್ತು ಇವರಿಗೆ ಬಿಜೆಪಿಯ ಮುಖಂಡರೊಬ್ಬರು ಕುಮ್ಮಕ್ಕು ಕೊಟ್ಟಿರುವುದು ಬೆಳಕಿಗೆ ಬಂದಿದೆ. ಖಾಂಡ್ಯ ಎಂಬಾತನ ಬಂಧನ ಪ್ರಕರಣದ ಇನ್ನಷ್ಟು ನಿಗೂಢತೆಗಳನ್ನು ಬಯಲಿಗೆಳೆಯುವುದರಲ್ಲಿ ಸಂಶಯವಿಲ್ಲ. ಪ್ರವೀಣ್ ಖಾಂಡ್ಯನ ಜೊತೆಗೆ ಸಂಬಂಧ ಇರುವ ತಮ್ಮದೇ ಪಕ್ಷದ ನಾಯಕರು ಯಾರು? ಅವರ ವಿರುದ್ಧ ಬಿಜೆಪಿ ಈವರೆಗೆ ಏನು ಕ್ರಮ ತೆಗೆದುಕೊಂಡಿದೆ? ವಿಪರ್ಯಾಸವೆಂದರೆ ಗಣಪತಿಯವರ ಪರವಾಗಿ ಬೀದಿಗಿಳಿದಿರುವ, ರಾಜ್ಯಾದ್ಯಾಂತ ಗದ್ದಲ ಎಬ್ಬಿಸುತ್ತಿರುವ ಬಿಜೆಪಿ, ಕಲ್ಲಪ್ಪ ಅವರ ಪರ ಒಂದು ಅಕ್ಷರವೂ ಮಾತನಾಡದೇ ಇರುವುದು ಯಾಕೆ? ಅಥವಾ ಕಲ್ಲಪ್ಪ ಅವರ ಆತ್ಮಹತ್ಯೆಯ ಹಿಂದೆ ಸಂಘಪರಿವಾರದ ನಾಯಕರು ಇರುವುದನ್ನು ಅರಿತೇ, ಅನಗತ್ಯವಾಗಿ ಗಣಪತಿಯವರ ಆತ್ಮಹತ್ಯೆ ಕುರಿತಂತೆ ಗದ್ದಲ ಎಬ್ಬಿಸುತ್ತಿದ್ದಾರೆಯೇ? ಆ ಮೂಲಕ ಕಲ್ಲಪ್ಪ ಅವರ ಆತ್ಮಹತ್ಯೆಯ ಪ್ರಕರಣ ಹಳ್ಳ ಹಿಡಿಯಲು, ಮಾಧ್ಯಮಗಳಲ್ಲಿ ಮುನ್ನೆಲೆಗೆ ಬರದಂತೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆಯೇ? ಇಬ್ಬರೂ ಧರಿಸಿರುವುದು ಖಾಕಿಯೇ ಆಗಿರುವಾಗ ಬಿಜೆಪಿ ಇವರಿಬ್ಬರ ಕುರಿತಂತೆ ಯಾಕೆ ಭೇದ ಮಾಡುತ್ತಿದೆ. ಗಣಪತಿಯವರ ತನಿಖೆಗೆ ದೊಡ್ಡ ದನಿಯಲ್ಲಿ ಒತ್ತಾಯಿಸುವ ಸಂದರ್ಭದಲ್ಲಿ ಸಣ್ಣದಾಗಿಯಾದರೂ ಕಲ್ಲಪ್ಪ ಅವರ ಆತ್ಮಹತ್ಯೆಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಬಹುದಿತ್ತಲ್ಲವೇ? ಬಿಜೆಪಿ ಮತ್ತು ಸಂಘಪರಿವಾರದ ಸಮಯ ಸಾಧಕತನ ಇದರಲ್ಲೇ ಬಹಿರಂಗವಾಗುತ್ತಿದೆ.
ಮುಖ್ಯವಾಗಿ ಎರಡೂ ಆತ್ಮಹತ್ಯೆ ಪ್ರಕರಣಗಳು ಗಂಭೀರವಾಗಿ ತನಿಖೆಯಾಗಬೇಕಾಗಿದೆ. ಕಲ್ಲಪ್ಪ ಯಾಕೆ ಆತ್ಮಹತ್ಯೆಗೈದರು? ಎನ್ನುವುದು ಎಷ್ಟು ಮುಖ್ಯವೋ ಅವರ ಆತ್ಮಹತ್ಯೆಗೆ ಕಾರಣವಾದ ಅಕ್ರಮ ದಂಧೆಯಾವುದು ಮತ್ತು ಅದರ ಹಿಂದೆ ಪಾಲುಗೊಂಡವರು ಯಾರು ಯಾರು? ಎನ್ನುವುದು ಬಹಿರಂಗವಾಗಬೇಕಾಗಿದೆ. ಬಜರಂಗದಳದ ಮುಖಂಡರ ಮತ್ತು ಬಿಜೆಪಿಯ ಮುಖಂಡ ಪಾತ್ರ ಈ ದಂಧೆಯಲ್ಲಿದೆಯೇ? ಎನ್ನುವುದು ತನಿಖೆ ನಡೆಯಬೇಕಾಗಿದೆ. ಒಂದು ಮೂಲದ ಪ್ರಕಾರ ವಿವಿಧ ಬೆಟ್ಟಿಂಗ್ ದಂಧೆಯಲ್ಲಿ, ಜೂಜಿನಲ್ಲಿ ಬಜರಂಗದಳದಂತಹ ಸಂಘಟನೆಗಳ ಕಾರ್ಯಕರ್ತರ ವೇಷದಲ್ಲಿರುವ ರೌಡಿಗಳ ಪಾತ್ರ ಬಹುದೊಡ್ಡದಿದೆ. ಇದರಲ್ಲಿ ಪರೋಕ್ಷವಾಗಿ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಬಜರಂಗದಳದ ಈ ರೌಡಿಗಳ ಬೆನ್ನಿಗೆ ರಾಜಕಾರಣಿಗಳ ಬೆಂಬಲವಿರುವುದರಿಂದ ಪೊಲೀಸ್ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಇಂತಹದೊಂದು ಸನ್ನಿವೇಶದಲ್ಲಿಯೇ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಘಪರಿವಾರದ ದುಷ್ಕರ್ಮಿಗಳು ತಾವು ತಿಂದು, ಅದನ್ನು ಕಲ್ಲಪ್ಪ ಅವರ ಮೂತಿಗೆ ಒರೆಸಿದ್ದಾರೆ. ಅವರ ವೃತ್ತಿಗೆ ಸಂಚಕಾರ ಬರುತ್ತದೆ ಎನ್ನುವಾಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಭಿನ್ನವಾದುದು. ಇಲ್ಲಿ ಗಣಪತಿ ತಾವು ಸಾಯುವ ಮುನ್ನ ಮಾಜಿ ಗೃಹ ಸಚಿವರೊಬ್ಬರ ಒತ್ತಡ ಇದೆ ಎಂದು ಹೇಳಿರುವುದೇ ಈ ಪರಿಯ ಗದ್ದಲಕ್ಕೆ ಕಾರಣವಾಗಿದೆ. ಆದರೆ ಅವರು ಯಾವ ಪ್ರಕರಣಕ್ಕೆ ಸಂಬಂಧಪಟ್ಟು ಒತ್ತಡ ಎಂದು ಬಯಲುಗೊಳಿಸಿಲ್ಲ. ಯಾವುದೇ ಅಕ್ರಮ ಚಟುವಟಿಕೆ ಇತ್ಯಾದಿಗಳಿಗೆ ಸಂಬಂಧಪಟ್ಟ ಮಾಹಿತಿಗಳೂ ಹೊರ ಬಿದ್ದಿಲ್ಲ. ಗಣಪತಿ ತನ್ನದೇ ತಪ್ಪುಗಳಿಂದ ಹಲವು ಬಾರಿ ಅಮಾನತುಗೊಂಡಿದ್ದಾರೆೆ. ಇದರಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ ಇಂತಹ ಅಮಾನತುಗಳು ನಡೆದಿವೆ. ಈ ಅಮಾನತಿನಿಂದಾಗಿ ಅವರ ವೃತ್ತಿ ಬದುಕಿಗೆ ಹಿನ್ನಡೆಯಾಗಿತ್ತು. ಇದರ ಕುರಿತಂತೆ ಶಿಫಾರಸಿಗಾಗಿ ಒಂದು ಬಾರಿ ಸಚಿವ ಜಾರ್ಜ್ ಬಳಿ ಗಣಪತಿ ತೆರಳಿದ್ದರು ಮತ್ತು ಅವರು ಅದಕ್ಕೆ ಸ್ಪಂದಿಸಿಲ್ಲ ಎನ್ನುವುದು ಪ್ರಾಥಮಿಕ ವರದಿ. ವೃತ್ತಿ ಬದುಕಿನ ಹಿನ್ನಡೆ ಅವರನ್ನು ಮಾನಸಿಕವಾಗಿ ಕುಗ್ಗಿಸಿತು. ಇಲ್ಲಿ ಜಾರ್ಜ್ ಯಾವ ರೀತಿಯಲ್ಲಿ ಗಣಪತಿಯವರ ಹಿನ್ನಡೆಗೆ ಹೊಣೆ? ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರಗೈದು ಸಿಕ್ಕಿ ಬಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗುವುದಿಲ್ಲವೇ? ತಮಗೆ ಬೇಕಾದ ವರ್ಗಾವಣೆ ಮಾಡದ ಸಚಿವರ ವಿರುದ್ಧ ಈ ಸಿಬ್ಬಂದಿ ‘ಆತ್ಮಹತ್ಯೆಯ ಬ್ಲಾಕ್‌ಮೇಲ್’ ಮಾಡುವುದಕ್ಕೆ ಪ್ರಚೋದನೆ ನೀಡಿದಂತಾಗುವುದಿಲ್ಲವೇ? ಇಷ್ಟಕ್ಕೂ ಒಬ್ಬ ಸಚಿವರ ಬಳಿ ಸರಕಾರಿ ಸಿಬ್ಬಂದಿ ಶಿಫಾರಸಿಗಾಗಿ ಹೋಗುವುದೇ ಅಪರಾಧವಲ್ಲವೇ? ಇವೆಲ್ಲವನ್ನೂ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗಿದೆ. ಇವುಗಳ ನಡುವೆಯೇ, ಆರೋಪಗಳಿಂದ ಮುಕ್ತವಾಗುವುದು ಸರಕಾರದ ಹೊಣೆಯೂ ಹೌದು.
ತಮ್ಮದೇ ಸಚಿವರ ಮೇಲೆ ಭಾರೀ ಆರೋಪಗಳು ಬರುತ್ತಿರುವುದರಿಂದ ಸಿಐಡಿ ತನಿಖೆಯ ವರದಿಗಿಂತ ನ್ಯಾಯಾಂಗ ತನಿಖೆಯ ವರದಿ ಹೆಚ್ಚು ವಿಶ್ವಾಸಾರ್ಹತೆಯನ್ನು ಪಡೆಯಬಹುದು. ಇದೇ ಸಂದರ್ಭದಲ್ಲಿ ತನಿಖೆಯ ಹೊಣೆಯನ್ನು ಸಿಬಿಐಗೆ ಕೊಡುವುದರಿಂದ ಸರಕಾರ ಏನನ್ನೂ ಕಳೆದುಕೊಳ್ಳುತ್ತಿರಲಿಲ್ಲ. ಈ ಹಿಂದೆ ಜಿಲ್ಲಾಧಿಕಾರಿ ರವಿ ಆತ್ಮಹತ್ಯೆಗೆ ರೆಕ್ಕೆ ಪುಕ್ಕ ನೀಡಲು ಯತ್ನಿಸಿದ ಬಿಜೆಪಿಗೆ ಸಿಬಿಐ ತನಿಖೆಯೇ ಭಾರೀ ಮುಖಭಂಗವನ್ನು ಮಾಡಿತ್ತು. ಅದು ಮತ್ತೊಮ್ಮೆ ಪುನರಾವರ್ತನೆಯಾಗುವ ಸಾಧ್ಯತೆ ಇತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ಜೊತೆಗೆ ಹಟಕ್ಕೆ ಬಿದ್ದು, ವಿವಾದವನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದರು. ಅದರ ಸಂಪೂರ್ಣ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಳ್ಳುತ್ತಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಡಿವೈಎಸ್ಪಿ ಕಲ್ಲಪ್ಪ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿಗಳು ಬಚಾವಾಗಲು ನೋಡುತ್ತಿದ್ದಾರೆ.







