ಉಡುಪಿ: ಇಂದಿನಿಂದ ಆಪರೇಷನ್ ಸುರಕ್ಷಾ ಕಾರ್ಯಾಚರಣೆ
ಉಡುಪಿ, ಜು.17: ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ‘ಆಪರೇಷನ್ ಸುರಕ್ಷಾ’ ಎಂಬ ವಿಶೇಷ ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾದ್ಯಂತ ಜು.18ರಿಂದ ಆ.17ರವರೆಗೆ ಹಮ್ಮಿ ಕೊಂಡಿದೆ.
ಈ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆಯ ವೇಳೆ ವಾಹನ ತಪಾಸಣೆಯನ್ನು ಕಟ್ಟುನಿಟ್ಟಾಗಿ ನಡೆಸಿ ಸಂಚಾರ ನಿಯಮ ಉಲ್ಲಂಘಿ ಸುವ ವಾಹನ ಚಾಲಕ/ಸವಾರರ ವಿರುದ್ಧ ಮೋಟಾರ್ ವಾಹನ ಕಾಯ್ದೆ ಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು. ಸಣ್ಣಪುಟ್ಟ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳನ್ನು ಕೂಡ ಕಠಿಣವಾಗಿ ಪರಿಗಣಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಗೂ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಲಾಗುವುದು. ಮುಖ್ಯವಾಗಿ ಅತಿವೇಗದ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ(ವನ್‌ವೇ) ಹಾಗೂ ಮೊಬೈಲ್ ಫೋನ್ ಬಳಸುತ್ತ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.
ಶಾಲಾ ಮಕ್ಕಳನ್ನು ಸಾಗಾಟ ಮಾಡುವ ವಾಹನಗಳನ್ನು ತಪಾಸಣೆ ನಡೆಸಿ ನಿಯಮ ಉಲ್ಲಂಘಿಸದಂತೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.





