ಬೇರೆ ಬೇರೆ ವೃತ್ತಿಗಳತ್ತ ನೋಡುತ್ತಿದ್ದಾರೆ ಭಾರತೀಯ ದಂತ ವೈದ್ಯರು
ಏಕೆ ಗೊತ್ತೇ ?

ಬೆಂಗಳೂರು, ಜು.18: ವಿಶ್ವದ ಅತಿ ಹೆಚ್ಚು ಸಂಖ್ಯೆಯ ಬಾಯಿ ಕ್ಯಾನ್ಸರ್ ಪ್ರಕರಣಗಳು ಭಾರತದಿಂದ ವರದಿಯಾಗುತ್ತಿದ್ದರೂ ದೇಶದಲ್ಲಿ, ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ದಂತ ವೈದ್ಯರ ತೀವ್ರ ಕೊರತೆಯಿದೆ. ಕರ್ನಾಟಕ ರಾಜ್ಯವೊಂದರಲ್ಲೇ ವರ್ಷಕ್ಕೆ ಕನಿಷ್ಠ 2,500 ದಂತ ವೈದ್ಯಕೀಯ ಪದವೀಧರರು ರಾಜ್ಯದ 36 ದಂತ ವೈದ್ಯಕೀಯ ಕಾಲೇಜುಗಳಿಂದ ಹೊರ ಬರುತ್ತಿದ್ದರೂ ರಾಜ್ಯ ಡೆಂಟಲ್ ಕೌನ್ಸಿಲ್‌ನಲ್ಲಿ ನೋಂದಾಯಿತ ದಂತ ವೈದ್ಯರ ಸಂಖ್ಯೆ ಕೇವಲ 30,000 ಆಗಿದೆ. ಅಷ್ಟಕ್ಕೂ ಇದಕ್ಕೆ ಕಾರಣವೇನು ಗೊತ್ತೇ ?
ದಂತ ವೈದ್ಯರಿಗೆ ದೊರೆಯುವ ಕಡಿಮೆ ವೇತನ ಹಾಗೂ ಸ್ವಂತ ಕ್ಲಿನಿಕ್ ಹೊಂದಲು ಸಾಕಷ್ಟು ದೊಡ್ಡ ಮೊತ್ತದ ಅವಶ್ಯಕತೆಯಿಂದ ಹೆಚ್ಚಿನ ದಂತ ವೈದ್ಯರು ಇತರ ವೃತ್ತಿಪರ ಶಿಕ್ಷಣ ಪಡೆಯಲು ಮನಸ್ಸು ಮಾಡುತ್ತಿರುವುದು.
ರಾಜ್ಯ ಡೆಂಟಲ್ ಕೌನ್ಸಿಲ್‌ನಲ್ಲಿ ನೋಂದಣಿಗೊಂಡಿರುವ 30,000 ಮಂದಿಯ ಪೈಕಿ ಕೇವಲ 25,000 ಮಂದಿ ರಾಜ್ಯದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎಂದು ಕರ್ನಾಟಕ ಡೆಂಟಲ್ ಕೌನ್ಸಿಲ್ ಅಧ್ಯಕ್ಷ ಡಾ. ರಾಜ್ ಕುಮಾರ್ ಎಸ್. ಅಲ್ಲೆ ಹೇಳುತ್ತಾರೆ.
ಧಾರವಾಡದ ಡೆಂಟಲ್ ಕಾಲೇಜೊಂದರಿಂದ 2010 ರಲ್ಲಿ ಬಿಡಿಎಸ್ ಪದವಿ ಪಡೆದಿರುವ ಡಾ.ಲವ್ಯ ಎನ್. ಇದೀಗ ಹಾಸ್ಪಿಟಲ್ ಆಡಳಿತ ವಿಷಯದಲ್ಲಿ ಸ್ನಾತ್ತಕೋತ್ತರ ಡಿಪ್ಲೊಮಾ ಮಾಡುತ್ತಿದ್ದಾರೆ.
ಕನ್ಸರ್ವೇಟಿವ್ ಡೆಂಟಿಸ್ಟ್ರಿಯಲ್ಲಿ ಸ್ಪೆಷಲೈಸೇಶನ್‌ನೊಂದಿಗೆ ಮಂಗಳೂರಿನಲ್ಲಿ ಎಂಡಿಎಸ್ ಮಾಡುತ್ತಿರುವ ಇನ್ನೊಬ್ಬರು ಹೇಳುವಂತೆ ಎಂಡಿಎಸ್ ಮಾಡಿದ ನಂತರವೂ ಉತ್ತಮ ವೇತನ ನಿರೀಕ್ಷಿಸುವಂತಿಲ್ಲ. ಬಿಡಿಎಸ್ ಪದವೀಧರರಿಗೆ ಪ್ರತಿ ತಿಂಗಳು 25,000 ರೂ.ದಿಂದ 30,000 ರೂ. ತನಕ ವೇತನ ದೊರೆತರೆ ಎಂಡಿಎಸ್ ಪದವೀಧರರಿಗೆ 50,000 ರೂ. ದಿಂದ 55,000 ರೂ. ದೊರೆಯುತ್ತದೆ. ಮೇಲಾಗಿ ಖಾಸಗಿ ಕ್ಲಿನಿಕ್ ಸ್ಥಾಪಿಸಲೂ 12 ರಿಂದ 15 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳುತ್ತಾರವರು.
ಬಿಡಿಎಸ್ ಪದವೀಧರರಿಗೆ ಸೂಕ್ತ ತರಬೇತಿಯ ಅಗತ್ಯವಿದೆಯೆಂದು ಖ್ಯಾತ ದಂತ ವೈದ್ಯಕೀಯ ಸರ್ಜನ್ ಡಾ. ಅಚ್ಯುತ್ ಬಾಳಿಗಾ ಹೇಳುತ್ತಾರೆ. ಮೇಲಾಗಿ ಪದವೀಧರರು ಗ್ರಾಮೀಣ ಪ್ರದೇಶಗಳಲ್ಲಿ ಕ್ಲಿನಿಕ್ ಸ್ಥಾಪಿಸಲು ಮುಂದೆ ಬರುತ್ತಿಲ್ಲವೆಂದೂ ಅವರು ವಿಷಾದ ವ್ಯಕ್ತಪಡಿಸುತ್ತಾರೆ.







