ರವಿ ಶಾಸ್ತ್ರಿ ದಾಖಲೆ ಸರಿಗಟ್ಟಿದ ಗ್ಲಾಮೋರ್ಗನ್ ಯುವಕ ಡೊನಾಲ್ಡ್
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ದ್ವಿಶತಕ

ಲಂಡನ್, ಜು.18: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ದ್ವಿಶತಕ ಬಾರಿಸಿದ ಗ್ಲಾಮೋರ್ಗನ್ ತಂಡದ ಯುವ ಆಟಗಾರ ಡೊನಾಲ್ಡ್ ಭಾರತದ ಮಾಜಿ ನಾಯಕ ರವಿ ಶಾಸ್ತ್ರಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ರವಿವಾರ ಡರ್ಬಿಶೈರ್ ವಿರುದ್ಧದ ಪಂದ್ಯದಲ್ಲಿ ಡೊನಾಲ್ಡ್ಡ್ ಈ ಸಾಧನೆ ಮಾಡಿದ್ದಾರೆ. ಡೊನಾಲ್ಡ್ ಕೇವಲ 123 ಎಸೆತಗಳಲ್ಲಿ 15 ಸಿಕ್ಸರ್‌ಗಳ ನೆರವಿನಿಂದ 200 ರನ್ ಗಳಿಸಿದರು. ಈ ಮೂಲಕ 1985ರಲ್ಲಿ ಭಾರತದ ಮಾಜಿ ಅಂತಾರಾಷ್ಟ್ರೀಯ ಆಟಗಾರ ರವಿ ಶಾಸ್ತ್ರಿ ತಮ್ಮ ದೇಶದಲ್ಲಿ ನಿರ್ಮಿಸಿದ್ದ ಅತ್ಯಂತ ವೇಗದ ದ್ವಿಶತಕದ ದಾಖಲೆಯನ್ನು ಸರಿಗಟ್ಟಿದರು. ರವಿ ಶಾಸ್ತ್ರಿ ಬರೋಡಾದ ವಿರುದ್ಧ 123 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು.
ಕೌಂಟಿ ಚಾಂಪಿಯನ್‌ಶಿಪ್ ಮುಖಾಮುಖಿಯಲ್ಲಿ ಗ್ಲಾಮೋರ್ಗನ್ ತಂಡ 96 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದಾಗ 19ರ ಹರೆಯದ ಡೊನಾಲ್ಡ್ ಕ್ರೀಸ್‌ಗೆ ಇಳಿದರು.
ಕ್ರೀಸ್‌ಗೆ ಇಳಿದ ತಕ್ಷಣ ಆಕ್ರಮಣಕಾರಿ ಆಟಕ್ಕೆ ಮುಂದಾದ ಡೊನಾಲ್ಡ್ ಸಿಕ್ಸರ್ ಸಿಡಿಸುವ ಮೂಲಕ ಚೊಚ್ಚಲ ಶತಕ ಪೂರೈಸಿದರು. ಡೊನಾಲ್ಡ್ ಸಿಕ್ಸರ್ ಸಿಡಿಸುವುದರೊಂದಿಗೆ 150 ಹಾಗೂ 200 ರನ್ ಪೂರೈಸಿದ್ದು ವಿಶೇಷ.
ಕೇವಲ 136 ಎಸೆತಗಳಲ್ಲಿ 234 ರನ್ ಗಳಿಸಿದ ಡೊನಾಲ್ಡ್ ಗ್ಲಾಮೋರ್ಗನ್ ತಂಡ ಮೊದಲ ದಿನದಾಟಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 491 ರನ್ ಗಳಿಸಲು ನೆರವಾದರು.







