ಫತೇಉಲ್ಲಾ ಗುಲೇನ್ ಗಡೀಪಾರು ವಿವಾದ: ಅಮೆರಿಕ-ಟರ್ಕಿ ನಡುವೆ ವಾಗ್ಯುದ್ಧ

ಅಂಕಾರ, ಜುಲೈ 18: ಶುಕ್ರವಾರ ರಾತ್ರಿ ಟರ್ಕಿಯಲ್ಲಿ ನಡೆದ ವಿಫಲ ಕ್ಷಿಪ್ರನೇನಾ ಕ್ರಾಂತಿಗೆ ಸಂಬಂಧಿಸಿ ಅಮೆರಿಕ ಹಾಗೂ ಟರ್ಕಿಯ ನಡುವೆ ವಾಗ್ಯುದ್ಧ ಕಾವೇರುತ್ತಿದೆಯೆಂದು ವರದಿಯಾಗಿದೆ. ಸೇನಾ ದಂಗೆಯ ಹಿಂದೆ ಈಗ ಅಮೆರಿಕದಲ್ಲಿ ನೆಲೆಸಿರು ಧರ್ಮಗುರು ಫತೇಉಲ್ಲಾ ಗುಲೇನ್ ರ ಪಾತ್ರವಿದೆಯೆಂದು ಟರ್ಕಿ ಆರೋಪಿಸುತ್ತಿದ್ದು ಗುಲೇನ್ ರನ್ನು ತಮ್ಮ ವಶಕ್ಕೆ ನೀಡಬೇಕೆಂದು ಅಮೆರಿಕದೊಂದಿಗೆ ಟರ್ಕಿ ನಿರಂತರ ಆಗ್ರಹಿಸುತ್ತಿದೆ ಎಂದು ವರದಿ ತಿಳಿಸಿದೆ.
ಅಮೆರಿಕದ ಪೆನ್ಸಲ್ವೇನಿಯಾದಲ್ಲಿರುವ ಗುಲೇನ್ ರಿಗೆ ಅಮೆರಿಕ ರಕ್ಷಣೆ ನೀಡುತ್ತಿದೆ ಎಂಬಂತೆ ಟರ್ಕಿ ಅಧ್ಯಕ್ಷ ಎರ್ದೊಗಾನ್ ಹೇಳಿಕೆ ನೀಡುತ್ತಿದ್ದಾರೆಂದು ಅಮೆರಿಕ ಭಾವಿಸಿಕೊಂಡಿದೆ. ಅವರ ಇಂತಹ ಟೀಕೆಗಳು ಮತ್ತು ಸೇನಾ ದಂಗೆಗೆ ಅಮೆರಿಕದ ಬೆಂಬಲವಿದೆ ಎಂಬಂತಹ ಹೇಳಿಕೆಗಳು ಟರ್ಕಿ ಮತ್ತು ಅಮೆರಿಕದ ಪರಸ್ಪರ ಸಂಬಂಧದಲ್ಲಿ ಬಿರುಕುಂಟು ಮಾಡಲಿದೆ ಎಂದು ಎರ್ದೊಗಾನ್ ರ ಟೀಕೆಗೆ ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಜಾನ್‌ಕೆರಿ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೊದಲು ಅಮೆರಿಕ ಕೇಳಿದ್ದ ಹಲವಾರು ಅಪರಾಧಿಗಳನ್ನು ಟರ್ಕಿ ಅಮೆರಿಕಕ್ಕೆ ಹಸ್ತಾಂತರಿಸಿದೆ ಆದ್ದರಿಂದ ಅಮೆರಿಕ ತನ್ನ ಕೇಳಿಕೆಯನ್ನು ಒಪ್ಪಲು ಸಿದ್ಧವಾಗಬೇಕೆಂದು ಎರ್ದೊಗಾನ್ ಹೇಳುತ್ತಿದ್ದಾರೆ. ಈ ನಡುವೆ ಗುಲೇನ್ ವಿಫಲ ಸೇನಾ ದಂಗೆಯ ಕುರಿತು ಸ್ಪಷ್ಟೀಕರಣ ನೀಡಿದ್ದು ತನಗಾಗಲಿ ತನ್ನ ಅನುಯಾಯಿಗಳಿಗಾಗಲಿ ಕ್ಷಿಪ್ರ ಸೇನಾ ದಂಗೆಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.ಈ ಹಿನ್ನೆಲೆಯಲ್ಲಿ ಗುಲೇನ್ ರ ವಿರುದ್ಧ ಸಾಕ್ಷ್ಯಗಳಿದ್ದಲ್ಲಿ ಹಾಜರು ಪಡಿಸಬೇಕೆಂದು ಕೆರಿ ಟರ್ಕಿಗೆ ತಿಳಿಸಿದ್ದು ದಂಗೆಯ ನೆಪದಲ್ಲಿ ಹಳೆಯ ಲೆಕ್ಕ ಚುಕ್ತಾಮಾಡುವ ನಿಲುವಿನಿಂದ ಎರ್ದೊಗಾನ್ ಹಿಂದೆ ಸರಿಯಬೇಕೆಂದು ಜಾನ್‌ಕೆರಿ ಆಗ್ರಹಿಸಿದ್ದಾರೆಂದು ವರದಿಯಾಗಿದೆ.
ತನ್ಮಧ್ಯೆ ಸೇನಾದಂಗೆಯಲ್ಲಿ ಮೃತರಾದವರ ಶವಸಂಸ್ಕಾರ ಸಂದರ್ಭದಲ್ಲಿ ಭಾಗವಹಿಸಿ ಎರ್ದೊಗಾನ್ "ಸರಕಾರಿ ವ್ಯವಸ್ಥೆಯಲ್ಲಿ ವೈರಸ್ ಬಾಧೆ ಕ್ಯಾನ್ಸರ್‌ನಂತೆ ಹರಡಿದ್ದು ಅದನ್ನು ನಿರ್ಮೂಲಿಸುವುದಕ್ಕೆ ಯತ್ನಿಸಲಾಗುವುದೆಂದು" ಹೇಳಿರಯವುದಾಗಿ ವರದಿಯಾಗಿದೆ.







