ನಿಮ್ಮ ವ್ಯವಹಾರಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುವುದು ಹೀಗೆ...
ತೆರಿಗೆ ತಪ್ಪಿಸುವುದು ಸುಲಭವಲ್ಲ ಈಗ!

ತೆರಿಗೆ ತಪ್ಪಿಸುವುದನ್ನು ಪರೀಕ್ಷಿಸಲು ಆದಾಯ ತೆರಿಗೆ ಇಲಾಖೆ ಘೋಷಿಸದೆ ಇರುವ ಆದಾಯದ ಮೇಲೆ ತನ್ನ ನಿಗಾವನ್ನು ತೀಕ್ಷ್ಣಗೊಳಿಸಿದೆ. ಇನ್ನು ಮುಂದೆ ನಿಮ್ಮ ಎಲ್ಲಾ ಅಧಿಕ ಮೊತ್ತದ ವ್ಯವಹಾರಗಳಲ್ಲಿ ಪಾನ್ ನಂಬರನ್ನು ಉಲ್ಲೇಖಿಸಲೇಬೇಕು. ಆಸ್ತಿ ನೋಂದಣಿಗಾರರು ಮತ್ತು ನೀವು ವ್ಯವಹರಿಸುವ ಬ್ಯಾಂಕ್, ವಿಮೆ, ಮ್ಯೂಚುವಲ್ ಫಂಡ್ ಕಂಪೆನಿ ಮತ್ತು ಕ್ರೆಡಿಟ್ ಕಾರ್ಡ್ ಕಂಪೆನಿಯಂತಹ ಹಣಕಾಸು ಸಂಸ್ಥೆಗಳು ನಿಮ್ಮ ದೊಡ್ಡ ಮೊತ್ತದ ವ್ಯವಹಾರಗಳ ಮಾಹಿತಿಯನ್ನು ತೆರಿಗೆ ಇಲಾಖೆಗೆ ಕೊಡುತ್ತವೆ.
ತೆರಿಗೆ ಇಲಾಖೆ ಈ ಮಾಹಿತಿಯನ್ನು ನೀವು ಸಲ್ಲಿಸಿದ ಟ್ಯಾಕ್ಸ್ ರಿಟರ್ನ್ ಮಾಹಿತಿ ಜೊತೆಗೆ ಹೋಲಿಸುತ್ತದೆ. ಈ ವಿವರಗಳನ್ನು ಪಡೆದ ತೆರಿಗೆ ಇಲಾಖೆ ನಿಮ್ಮ ಒಟ್ಟು ಆದಾಯವನ್ನು ನಿಮ್ಮ ವೆಚ್ಚಗಳು ಮತ್ತು ಹೂಡಿಕೆಗಳ ಜೊತೆಗೆ ವಿಶ್ಲೇಷಿಸಿ ಸೂಕ್ತ ತೆರಿಗೆ ಮೊತ್ತವನ್ನು ಅಂದಾಜಿಸಲಿದೆ ಮತ್ತು ಅಂತಿಮವಾಗಿ ಏನಾದರೂ ತೆರಿಗೆ ಉಲ್ಲಂಘನೆಯಾಗಿದ್ದರೆ ತಿಳಿದುಕೊಳ್ಳಲಿದೆ ಎಂದು ಟ್ಯಾಕ್ಸ್‌ಸ್ಪಾನರ್ ಡಾಟ್ ಕಾಮ್ ಸಿಇಒ ಸುಧೀರ್ ಕೌಶಿಕ್ ಹೇಳಿದ್ದಾರೆ. ನಿಮ್ಮ ದೊಡ್ಡ ಮೊತ್ತದ ವ್ಯವಹಾರಗಳನ್ನು ತೆರಿಗೆ ಇಲಾಖೆ ಈ ಕೆಳಗಿನ ಹಾದಿಯಲ್ಲಿ ನಿಗಾ ಇಡಲಿದೆ:
1. ನೀವು ವಿತ್ತೀಯ ವರ್ಷವೊಂದರಲ್ಲಿ ವಿಭಿನ್ನ ಖಾತೆಗಳ ಮೂಲಕ ಇಟ್ಟಿರುವ ನಗದು ಠೇವಣಿ, ಡಿಮಾಂಡ್ ಡ್ರಾಫ್ಟ್ ಅಥವಾ ಫಿಕ್ಸ್‌ಡ್ ಡಿಪಾಸಿಟ್‌ಗಳ ಮೊತ್ತ ಒಟ್ಟಾಗಿ ರೂ. 10 ಲಕ್ಷಗಳಿದ್ದರೆ ನಿಮ್ಮ ಬ್ಯಾಂಕ್ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿದೆ.
2. ಯಾವುದೇ ಚರಾಸ್ತಿ ರೂ. 30 ಲಕ್ಷವನ್ನು ಮೀರಿ ಖರೀದಿಸಿರುವುದು ಅಥವಾ ಮಾರಿರುವ ಬಗ್ಗೆ ಆಸ್ತಿ ನೋಂದಣಿ ಮಾಹಿತಿ ನೀಡಲಿದೆ.
3. ಈಗ ರೂ. 50 ಲಕ್ಷವನ್ನು ಮೀರಿದ ಆಸ್ತಿಯನ್ನು ಖರೀದಿಸಿದಲ್ಲಿ ಟಿಸಿಎಸ್ (ಮೂಲದಲ್ಲಿ ಸಂಗ್ರಹಿಸಿದ ತೆರಿಗೆ) ಅನ್ನು ಶೇ. 1ರಷ್ಟು ಕಡಿತ ಮಾಡಲಾಗುತ್ತದೆ ಮತ್ತು ತೆರಿಗೆ ಇಲಾಖೆಗೆ ಪಾವತಿಸಲಾಗುತ್ತದೆ. ಇದು ವ್ಯವಹಾರವನ್ನು ವರದಿ ಮಾಡುವ ಮತ್ತೊಂದು ಹಾದಿಯಾಗಿದೆ.
4. ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ರೂ. 1 ಲಕ್ಷ ಅಥವಾ 10 ಲಕ್ಷ ಅಥವಾ ಹೆಚ್ಚು ಮೊತ್ತವನ್ನು ಒಂದು ಹಣಕಾಸು ವರ್ಷದಲ್ಲಿ ನಗದು ಪಾವತಿಸಿದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಕಂಪೆನಿಯು ಈ ವ್ಯವಹಾರಗಳನ್ನು ತೆರಿಗೆ ಅಧಿಕಾರಿಗಳಿಗೆ ವರದಿ ನೀಡಲಿದೆ.
5. ಷೇರು, ಡಿಬೆಂಚರ್ ಮತ್ತು ಮ್ಯೂಚುವಲ್ ಫಂಡ್‌ಗಳನ್ನು ರೂ. 10 ಲಕ್ಷ ಅಥವಾ ಹೆಚ್ಚಿನ ಮೊತ್ತಕ್ಕೆ ಖರೀದಿಸಿದಲ್ಲಿ ಕಂಪನಿಗಳು ತೆರಿಗೆ ಅಧಿಕಾರಿಗಳಿಗೆ ವರದಿ ನೀಡಬೇಕು.
6. ನೀವು ರು. 50 ಲಕ್ಷವನ್ನು ಮೀರಿ ಒಂದು ವರ್ಷದಲ್ಲಿ ಆದಾಯ ಪಡೆಯುತ್ತಿದ್ದಲ್ಲಿ ನೀವು ನಿಮ್ಮ ಆಸ್ತಿಗಳನ್ನು ಮತ್ತು ವವ್ಯಹಾರವನ್ನು ಈ ವರ್ಷದಿಂದ ಹೊಸ ಆದಾಯ ತೆರಿಗೆ (ಐಟಿಆರ್) ಫಾರ್ಮ್ ಮೂಲಕ ತಿಳಿಸಬೇಕು.
7. ರೂ. 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳು ಮತ್ತು ಸೇವೆಗಳನ್ನು ಖರೀದಿಸುವಾಗ ಪ್ಯಾನ್ ನಮೂದಿಸುವುದು ಈಗ ಕಡ್ಡಾಯವಾಗಿದೆ. ಅಲ್ಲದೆ ರು. 2 ಲಕ್ಷ ಮತ್ತು ಹೆಚ್ಚಿನ ಮೊತ್ತದ ಸರಕು ಮತ್ತು ಸೇವೆಗಳಿಗೆ ನಗದು ಪಾವತಿಸುವಾಗ ಟಿಸಿಎಸ್ ಅನ್ನು ಜೂನ್ 1ರಿಂದ ಆರಂಭಿಸಲಾಗಿದೆ.
8. ತಜ್ಞರ ಪ್ರಕಾರ ಟಿಡಿಎಸ್ ತೆರಿಗೆ ಪಾವತಿದಾರರ ಆದಾಯ ಪತ್ತೆ ಹಚ್ಚುವ ಮತ್ತೊಂದು ದಾರಿಯಾಗಿದೆ. ವರ್ಷಕ್ಕೆ ಫಿಕ್ಸ್‌ಡ್ ಡೆಪಾಸಿಟ್‌ಗಳಿಂದ ರು. 10,000ಕ್ಕಿಂತ ಹೆಚ್ಚಿನ ಬಡ್ಡಿ ಬಂದಲ್ಲಿ ಬ್ಯಾಂಕುಗಳು ಟಿಡಿಎಸ್ ಅನ್ನು ಕಡಿತ ಮಾಡುತ್ತವೆ.
9. ಶೇ. 1ರಷ್ಟು ಲಕ್ಸುರಿ ತೆರಿಗೆಯನ್ನು ರೂ. 10 ಲಕ್ಷ ಮೀರಿದ ಕಾರು ಖರೀದಿಯಲ್ಲಿ ಹೇರಲಾಗುತ್ತದೆ. ಅದನ್ನು ಕಾರು ಮಾರುವವರೇ ಕಡಿತ ಮಾಡುತ್ತಾರೆ ಮತ್ತು ಎಕ್ಸ್ ಶೋರೂಂ ಬೆಲೆಯಲ್ಲಿ ಅನ್ವಯಿಸುತ್ತದೆ. ಆದರೆ ಈ ಹೆಚ್ಚುವರಿ ಪಾವತಿಯನ್ನು ಖರೀದಿದಾರನ ಒಟ್ಟು ತೆರಿಗೆ ವ್ಯವಹಾರದಿಂದ ಕಡಿತಗೊಳ್ಳಬಹುದು.
10. ನೀವು ನಿಮ್ಮ ಪ್ಯಾನನ್ನು ಈ ಕೆಳಗಿನ ವ್ಯವಹಾರಗಳಲ್ಲೂ ಕೊಡಬೇಕು:
ಎ) ದ್ವಿಚಕ್ರ ವಾಹನಗಳು ಹೊರತುಪಡಿಸಿ ಇತರ ವಾಹನಗಳ ಮಾರಾಟ ಅಥವಾ ಖರೀದಿ.
ಬಿ) ಬ್ಯಾಂಕ್ ಅಥವಾ ಡಿಮಾಟ್ ಖಾತೆ ತೆರೆಯುವುದು; ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಹಾಕುವುದು.
ಸಿ) ರೂ. 50,000 ಮೀರಿದ ಫಿಕ್ಸ್‌ಡ್ ಡೆಪಾಸಿಟ್ ತೆರೆಯುವುದು.
ಡಿ) ರೂ. 50,000 ಮೀರಿದ ವಿಮಾ ಪಾವತಿ ಮಾಡುವುದು.
ಇ) ರೆಸ್ಟೊರೆಂಟ್ ಅಥವಾ ಹೊಟೇಲ್ ಅಥವಾ ವಿದೇಶಿ ಪ್ರವಾಸ ಬಿಲ್ಲುಗಳನ್ನು ರೂ. 50,000ಕ್ಕೆ ಮೀರಿ ಪಾವತಿಸುವುದು.
ಎಫ್) ರೂ. 50,000 ಮೀರಿದ ಮ್ಯೂಚುವಲ್ ಫಂಡ್ಸ್, ಡಿಬೆಂಚರ್, ಬಾಂಡುಗಳ ಖರೀದಿ.
ಜಿ) ರೂ. 50,000 ಮೀರಿದ ನಗದನ್ನು ಬ್ಯಾಂಕಿನಲ್ಲಿ ಠೇವಣಿ ಇಡುವುದು.
ಕೃಪೆ: profit.ndtv.com







