ಕಾಶ್ಮೀರದ ಉದ್ವಿಗ್ನ ಸ್ಥಿತಿಗೆ ಮೋದಿ ಪಾಕ್ ಭೇಟಿಯೇ ಕಾರಣ: ಸಚಿವ ಆಝಂಖಾನ್
ವಾರಣಾಸಿ,ಜುಲೈ 18: ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಕಾರಣವೆಂದು ಉತ್ತರಪ್ರದೇಶ ನಗರಾಭಿವೃದ್ಧಿ ಸಚಿವ ಆಝಂ ಖಾನ್ ಹೇಳಿದ್ದಾರೆಂದು ವರದಿಯಾಗಿದೆ. ಅಸಿಘಾಟ್‌ನಲ್ಲಿ ಗಂಗಾ ಪುಕಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಆಝಂಖಾನ್ "ಎಂದು ನರೇಂದ್ರ ಮೋದಿ ಗುಟ್ಟಾಗಿ ಪಾಕ್ ಪ್ರಧಾನಿ ನವಾಝ್ ಶರೀಫ್‌ರನ್ನು ಭೇಟಿಯಾಗಲು ಹೋದರೋ ಅಂದಿನಿಂದಲೇ ಕಾಶ್ಮೀರದ ಪರಿಸ್ಥಿತಿ ಕೆಟ್ಟುಹೋಗಿದೆ” ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆಂದು ವರದಿ ತಿಳಿಸಿದೆ.
ಕಪ್ಪು ಹಣ ದೇಶಕ್ಕೆ ತರುವ ಮೋದಿಯ ಹೇಳಿಕೆಯನ್ನು ಮತ್ತೊಮ್ಮೆ ಉಲ್ಲೇಖಿಸಿದ ಆಝಂಖಾನ್ ಪ್ರತಿಯೊಬ್ಬ ನಾಗರಿಕರ ಖಾತೆಗೆ ಎಂದು 20-20ಲಕ್ಷ ಬಂದು ಸೇರಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ 2014ರ ಲೋಕಸಭಾ ಚುನಾವಣೆಯ ವೇಳೆ ದೇಶದ ಜನರಿಗೆ ಕಪ್ಪು ಹಣದೇಶಕ್ಕೆ ತಂದು ನಾಗರಿಕರ ಖಾತೆಗೆ ಭರ್ತಿಮಾಡಲಾಗುವುದು ಎಂದಿದ್ದರು. ಆದರೆ ಬಡಜನರ ಖಾತೆಗೆ ಒಂದು ರೂಪಾಯಿಯೂ ತಲುಪಿಲ್ಲ ಎಂದು ಖಾನ್ ಟೀಕಿಸಿದ್ದಾರೆ.
ಗಂಗಾ ಸ್ವಚ್ಛತೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜಕೀಯ ಲಾಭವೆತ್ತುವ ಕೆಲಸ ನಡೆಯುತ್ತಿದ್ದು ಪ್ರಧಾನಿ ಈ ಕುರಿತು ತೊಟ್ಟ ಸಂಕಲ್ಪದಂತೆ ಯಾವೊಂದು ಪ್ರಯತ್ನ ನಡೆದಿಲ್ಲ. ಇದೀಗ ದೇಶದ ಜನರಿಗೆ ಬಹಳ ಸ್ಪಷ್ಟವಾಗಿ ಅರಿವಾಗಿದೆ ಎಂದು ಆಝಂಖಾನ್ ಹೇಳಿದ್ದಾರೆಂದು ವರದಿ ತಿಳಿಸಿದೆ. ಸಾಧು ಸಂತರು ಮತ್ತು ಎಲ್ಲ ಪ್ರಬುದ್ಧ ಜನರು ಗಂಗಾ ನದಿಯನ್ನು ಸ್ವಚ್ಛವಾಗಿರಿಸುವುದಕ್ಕಾಗಿ ಜಾಗೃತಿಮೂಡಿಸಬೇಕಾಗಿದೆ. ಅವರ ಪ್ರಯತ್ನಗಳಿಂದ ವ್ಯಾಪಕ ಪ್ರಭಾವ ಆಗಲಿದೆ ಎಂದು ಈ ಸಂದರ್ಭದಲ್ಲಿ ಆಝಂಖಾನ್ ಕರೆನೀಡಿದ್ದಾರೆಂದು ವರದಿಯಾಗಿದೆ. ಗಂಗಾ ಪುಕಾರ್ ಕಾರ್ಯಕ್ರಮದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸಹಿತ ಅನೇಕ ಗಣ್ಯರು ಭಾಗವಹಿಸಿ ಜನರನ್ನುದ್ದೇಶಿಸಿ ಮಾತಾಡಿದ್ದಾರೆ.ಆಝಂ ಖಾನ್‌ರು ವಿದ್ಯಾಮಠಕ್ಕೆ ಭೇಟಿನೀಡಿದಾಗ ಅವರಿಗೆ ಅದ್ದೂರಿ ಸ್ವಾಗತ ದೊರಕಿತೆಂದು ವರದಿಯಾಗಿದೆ.