ವಿವಿ ಕಾಲೇಜಿನಲ್ಲಿ ತುಳು ಸ್ಪೀಕಿಂಗ್ ಕೋರ್ಸ್: ಡಾ. ಉದಯ ಕುಮಾರ್

ಮಂಗಳೂರು, ಜು.18: ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಂಜೆಯ ವೇಳೆಗೆ ತುಳುವೇತರರಿಗೆ ಅನುಕೂಲವಾಗುವಂತೆ ತುಳು ಸ್ಪೀಕಿಂಗ್ ಕೋರ್ಸ್ ಆರಂಭಿಸುವ ಆಲೋಚನೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಇರ್ವತ್ತೂರು ಅಭಿಪ್ರಾಯಿಸಿದ್ದಾರೆ.
ಅವರು ಇಂದು ಮಂಗಳೂರು ವಿ.ವಿ. ಹಾಗೂ ಸಂಯೋಜಿತ ಕಾಲೇಜುಗಳಲ್ಲಿ ಇರುವ ಶೈಕ್ಷಣಿಕ ಅವಕಾಶ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯುಕ್ತ ನಗರದ ವಿ.ವಿ. ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ ‘ಓಪನ್‌ಹೌಸ್’ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು.
ನಗರದ ಪೊಲೀಸ್ ಇಲಾಖೆಯಲ್ಲಿರುವ ಹೊರ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಾಗಿ ನಡೆಸಲಾದ ತುಳು ಸ್ಪೀಕಿಂಗ್ ಕೋರ್ಸ್‌ಗೆ ಉತ್ತಮ ಸ್ಪಂದನೆ ದೊರೆತಿರುವ ಹಿನ್ನೆಲೆಯಲ್ಲಿ ಈ ಕೋರ್ಸನ್ನು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮುಂದುವರಿಸುವ ಪ್ರಸ್ತಾಪವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಎ.ಎಂ. ಖಾನ್, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೌಶಲ್ಯ ಅಭಿವೃಧ್ಧಿ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪದವಿವೂರ್ವ, ಪದವಿ, ಸ್ನಾತಕೋತ್ತರ ವಿವಿಧ ಹಂತಗಳಲ್ಲಿ ಉದ್ಯೋಗಕ್ಕೆ ಪೂರಕ ಕೌಶಲಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಈ ಕೇಂದ್ರ ನೆರವಾಗಲಿದೆ ಎಂದವರು ತಿಳಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್ ಜನರಲ್‌ಮೆನೇಜರ್ ಚಂದ್ರಶೇಖರ ರಾವ್, ವರ್ಷಂಪ್ರತಿ ಸುಮಾರು 30 ಸಾವಿರ ವಿವಿಧ ಉದ್ಯೋಗಳು ಸೃಷ್ಟಿಯಾವವ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯುವಜನತೆ ಆಸಕ್ತಿ ತೋರಿಸಬೇಕು ಎಂದರು.
ಸಿಂಡಿಕೇಟ್ ಸದಸ್ಯ ಪ್ರಸನ್ನ ಕುಮಾರ್, ಸಿಂಡಿಕೇಟ್ ಸದಸ್ಯರಾದ ಮೋಹನ್‌ಚಂದ್ರ ನಂಬಿಯಾರ್, ಹರೀಶ್ ಆಚಾರ್ ಮುಖ್ಯ ಅತಿಥಿಗಳಾಗಿದ್ದರು. ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಭಾಷಿಣಿ ಶ್ರೀವತ್ಸ ವಂದಿಸಿದರು.







