ತಮ್ಮ ವೇತನವನ್ನು ಶೇ.100ರಷ್ಟು ಹೆಚ್ಚಿಸಿಕೊಳ್ಳಲು ಸಜ್ಜಾದ ಸಂಸದರು
ಎ.1ರಿಂದಲೇ ಪೂರ್ವಾನ್ವಯವಾಗಿ ಜಾರಿ

ಹೊಸದಿಲ್ಲಿ,ಜು.18: ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಚ್ಛೇ ದಿನ್‌ಗಳು ಯಾರಿಗೆ ಬಂದಿವೆಯೋ ಗೊತ್ತಿಲ್ಲ, ಕಾಯುವವರಂತೂ ಕಾಯುತ್ತಲೇ ಇದ್ದಾರೆ. ಆದರೆ ಸಂಸತ್ತಿನ ಸುಮಾರು 800 ಸದಸ್ಯರ ಪಾಲಿಗಂತೂ ‘ಅಚ್ಛೇ ದಿನ್’ಗಳು ಬರುತ್ತಿರುವುದು ಸುಳ್ಳಲ್ಲ. ಪ್ರಧಾನಿ ಮೋದಿ ಹೂಂ ಎನ್ನುವುದೇ ತಡ, ಸಂಸದರ ಮೂಲವೇತನ ಈಗಿನ ಮಾಸಿಕ 50,000 ರೂ.ಗಳಿಂದ ಒಂದು ಲಕ್ಷ ರೂ.ಗೆ ಏರಲಿದೆ.
ಮೊದಲು ಸಂಸದರ ಸಮಿತಿಯಿಂದ ಶಿಫಾರಸುಗೊಂಡು, ಬಳಿಕ ಸಚಿವರ ಸಮಿತಿಯಿಂದ ಮಂಜೂರುಗೊಂಡು ಸಂಪುಟಕ್ಕೆ ಸಲ್ಲಿಸಲಾಗಿರುವ ಸಂಸದರ ನೂತನ ವೇತನಗಳು ಮತ್ತು ಭತ್ತೆಗಳ ಪ್ರಸ್ತಾವನೆಗೆ ಹಸಿರು ನಿಶಾನೆಯನ್ನು ತೋರಿಸುವ ಬಗ್ಗೆ ನಿರ್ಧಾರವೊಂದನ್ನು ಈಗ ಮೋದಿ ಕೈಗೊಳ್ಳಬೇಕಿದೆ.
ವೇತನ ಮತ್ತು ಭತ್ತೆಗಳ ಪರಿಷ್ಕರಣೆಗೆ ಪ್ರಧಾನಿ ಒಪ್ಪಿಕೊಂಡರೆ, ಸಂಸತ್ತು ಪ್ರಸಕ್ತ ಅಧಿವೇಶನದಲ್ಲಿಯೇ ಇದನ್ನು ಅಂಗೀಕರಿಸುವ ನಿರೀಕ್ಷೆಯಿದೆ. ನೂತನ ವೇತನಗಳು ಎಪ್ರಿಲ್ 1ರಿಂದ ಪೂರ್ವಾನ್ವಯಗೊಂಡು ಜಾರಿಯಾಗಲಿವೆ.
ಸಂಸದರು ಒಂದು ಲಕ್ಷ ರೂ.ಗಳ ದುಪ್ಪಟ್ಟು ಮಾಸಿಕ ವೇತನವನ್ನು ಜೇಬಿಗಿಳಿಸಲಿದ್ದಾರೆ. ಜೊತೆಗೆ ಕ್ಷೇತ್ರಭತ್ತೆಯು 90,000 ರೂ.ಗಳಿಗೆ ಹೆಚ್ಚಲಿದೆ. ಸಂಸದರ ಕಚೇರಿ ಸಿಬ್ಬಂದಿಗಳಿಗೂ ಶೇ.100ರಷ್ಟು ವೇತನ ಏರಿಕೆ ಭಾಗ್ಯ ದೊರೆಯಲಿದೆ.
ಸಂಸದರ ಅಧಿಕೃತ ನಿವಾಸಗಳಿಗೆ ವಾರ್ಷಿಕ ಪೀಠೋಪಕರಣ ಭತ್ತೆ ಇಮ್ಮಡಿಗೊಂಡು 1.50 ಲ.ರೂ.ಗಳಾಗಲಿವೆ. ಅವರ ಮತಕ್ಷೇತ್ರದಲ್ಲಿಯ ಅಧಿಕೃತ ನಿವಾಸಕ್ಕೆ ಮಾಸಿಕ 1,700 ರೂ.ವೌಲ್ಯದ ಉಚಿತ ಬ್ರಾಡ್‌ಬ್ಯಾಂಡ್ ಸೇವೆ ಲಭಿಸಲಿದೆ.
ಮಾಜಿ ಸಂಸದರ ಮಾಸಿಕ ಪಿಂಚಣಿಯು ಈಗಿನ 20,000 ರೂ.ಗಳಿಂದ 35,000 ರೂ.ಗಳಿಗೆ ಜಿಗಿಯಲಿದೆ.
ವೇತನ,ಕ್ಷೇತ್ರ ಮತ್ತು ಕಚೇರಿ ಸಿಬ್ಬಂದಿ ಭತ್ತೆಗಳು ಸೇರಿದಂತೆ ಸಂಸದರ ಮೂಲ ಸಂಭಾವನೆಯ ಮೊತ್ತ ಮಾಸಿಕ 1,90,000 ರೂ.ಗಳಿಂದ 2,80,000 ರೂ.ಗಳಿಗೆ ಏರಿಕೆಯಾಗಲಿದೆ.
ಸಂಸದರ ವೇತನಗಳನ್ನು ಕೊನೆಯ ಬಾರಿ ಆರು ವರ್ಷಗಳ ಹಿಂದೆ ಪರಿಷ್ಕರಿಸಲಾಗಿತ್ತು. ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಳ್ಳುವ ಅವಕಾಶ ಕಾನೂನು ರೂಪಕರಿಗೆ ಇರಕೂಡದು ಎಂಬ ಟೀಕಾಕಾರರ ಅಭಿಪ್ರಾಯಕ್ಕೆ ಕೆಲವು ಸಂಸದರೂ ಸಹಮತ ವ್ಯಕ್ತಪಡಿಸಿದ್ದಾರೆ.
ವೇತನ ಏರಿಕೆಗೆ ನನ್ನ ವಿರೋಧವಿದೆ. ನಾವಿಲ್ಲಿ ಜನರ ಸೇವೆಗಾಗಿ ಶ್ರಮಿಸುತ್ತಿದ್ದೇವೆ ಮತ್ತು ನಮಗೆ ಈಗೇನು ದೊರೆಯುತ್ತಿದೆಯೇ ಅದು ಸಾಕಷ್ಟಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಸೂನ್ ಬ್ಯಾನರ್ಜಿ ಹೇಳಿದರೆ, ವೇತನ ಹೆಚ್ಚಳವನ್ನು ನಾವು ನಿರ್ಧರಿಸಬಾರದು, ಸ್ವತಂತ್ರ ಸಮಿತಿಯೊಂದು ಆ ಕಾರ್ಯವನ್ನು ಮಾಡಬೇಕು ಎನ್ನುವುದು ನಮ್ಮ ಸ್ಪಷ್ಟ ಅಭಿಪ್ರಾಯವಾಗಿದೆ ಎಂದು ಸಿಪಿಎಂ ಸಂಸದ ಎಂ.ರಾಜೇಶ ಹೇಳಿದರು.
ಆದರೆ ಹೆಚ್ಚಿನ ಸಂಸದರು ವೇತನ ಏರಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ
ಸರಕಾರಿ ನೌಕರರ ವೇತನಗಳನ್ನು ಹೆಚ್ಚಿಸಲಾಗಿದೆ. ಸಂಸದರ ವೇತನಗಳನ್ನೂ ಹೆಚ್ಚಿಸಬೇಕು ಎಂದು ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಹೇಳಿದರೆ, ಸೂಕ್ತ ವೇತನವು ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲಿದೆ ಎಂದು ತೆಲುಗು ದೇಶಮ್‌ನ ಕೆ.ರಾಮಮೋಹನ್ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.





