ಗೂಂಡಾ ಕಾಯ್ದೆಯಡಿಯಲ್ಲಿ ಮೂವರ ಬಂಧನ

ಮಂಗಳೂರು, ಜು.18; ಮಂಗಳೂರು ನಗರ ಪೊಲೀಸರು ಗೂಂಡಾ ಕಾಯ್ದೆಯಡಿಯಲ್ಲಿ ಮೂವರನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಜೊಕಟ್ಟೆ ಯ ತೋಕೂರಿನ ವಿಶ್ವನಾಥ ಪೂಜಾರಿ ಯಾನೆ ಕೊಡಿಕೆರೆ ವಿಶ್ವ ಯಾನೆ ವಿಶ್ವ(33), ಬಜ್ಪೆ ಹೊಸನಗರದ ಹನೀಫ್ ಯಾನೆ ಹನೀಫ್ ಅದ್ಯಪಾಡಿ (37), ಕಾವೂರು ಶಾಂತಿನಗರದ ಮುಸ್ತಫಾ (30) ಎಂಬವರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.
ಜೊಕಟ್ಟೆಯ ತೋಕೂರಿನ ವಿಶ್ವನಾಥ ಪೂಜಾರಿಯ ಮೇಲೆ ಕೊಲೆ, ಕೊಲೆಗೆ ಯತ್ನ, ದರೋಡೆಗೆ ಸಂಚು, ಹಲ್ಲೆ, ದೊಂಬಿ, ಅಪರಾಧಿಕ ಒಳಸಂಚು ಮತ್ತು ಕೊಲೆ ಬೆದರಿಕೆ ಸೇರಿದಂತೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿರುವ ಪೊಲೀಸರು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಹನೀಫ್ ಅದ್ಯಪಾಡಿಯ ಮೇಲೆ ಕೊಲೆ, ಕೊಲೆಗೆ ಯತ್ನ ಮತ್ತು ಹಲ್ಲೆ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿಧ ಠಾಣೆಗಳಲ್ಲಿ ಸುಮಾರು 6 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಮುಸ್ತಫಾನ ಮೇಲೆ ಕೊಲೆ ಮತ್ತು ಕೊಲೆಗೆ ಯತ್ನ ಸೇರಿದಂತೆ ಮಂಗಳೂರು ನಗರದಾದ್ಯಂತ ವಿವಿದ ಠಾಣೆಗಳಲ್ಲಿ ಸುಮಾರು 4 ಪ್ರಕರಣಗಳು ದಾಖಲಾಗಿತ್ತು. ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಈ ಮೂವರು ಆರೋಪಿಗಳ ಬಂಧನಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಚಂದ್ರಶೇಖರ್ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದ ಆಜ್ಞೆಯನ್ನು ಹೊರಡಿಸಿದ್ದರು.







