ನಾಗರಿಕರನ್ನು ಉಗ್ರಗಾಮಿಗಳಂತೆ ನಡೆಸಿಕೊಳ್ಳಲಾಗುತ್ತಿದೆ: ಆಝಾದ್
ಕಾಶ್ಮೀರ ಹಿಂಸಾಚಾರ ಚರ್ಚೆ

ಹೊಸದಿಲ್ಲಿ, ಜು.18: ಜಮ್ಮು-ಕಾಶ್ಮೀರದ ಪಿಡಿಪಿ-ಬಿಜೆಪಿ ಸರಕಾರವು ಜನರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆಯೆಂದು ಆರೋಪಿಸಿ, ಸಂಸತ್ತಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಇಂದು ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನಾಗರಿಕರನ್ನೂ ಉಗ್ರಗಾಮಿಗಳಂತೆ ಪರಿಗಣಿಸಬೇಕೇ? ಎಂದು ಪ್ರಶ್ನಿಸಿದೆ.
ಕಾಶ್ಮೀರ ಕಣಿವೆಯ ಹಿಂಸಾಚಾರದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್, ದಯವಿಟ್ಟು ನಾಗರಿಕರನ್ನು ಉಗ್ರಗಾಮಿಗಳಂತೆ ಪರಿಗಣಿಸಿ ಕಾಶ್ಮೀರಿಗಳನ್ನು ದಮನಿಸಬೇಡಿ. ಕಣಿವೆಯ ನಿವಾಸಿಗಳ ವಿರುದ್ಧ ದಯವಿಟ್ಟು ಮಿತಿಮೀರಿದ ಬಲ ಉಪಯೋಗಿಸಬೇಡಿ ಎಂದರು.
ಮಕ್ಕಳು, ವೃದ್ಧರು ಹಾಗೂ ಮಹಿಳೆಯರ ಮೇಲೆ ಬಂದೂಕುಗಳನ್ನು ಬಳಸಲಾಗಿದೆಯೆಂದು ಆರೋಪಿಸಿದ ಅವರು, ಸ್ಥಳೀಯರನ್ನೂ ನಾವು ಉಗ್ರಗಾಮಿಗಳಂತೆ ನಡೆಸಿಕೊಳ್ಳಬೇಕೇ? ಉಗ್ರರ ವಿರುದ್ಧ ಬಳಸುವ ಗುಂಡುಗಳನ್ನೇ ರಾಜ್ಯದ ಅಮಾಯಕ ಜನರ ಮೇಲೆ ಬಳಸಬೇಕೇ? ಎಂದು ಪ್ರಶ್ನಿಸಿದರು.
ಜು.8ರಂದು ಹಿಝ್ಬುಲ್ ಮುಝಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ಕುರಿತು ಚರ್ಚೆಯಾಗಬೇಕೆಂಬ ವಿಪಕ್ಷದ ಬೇಡಿಕೆಯನ್ನು ಸರಕಾರವು ಇಂದು ಬೆಳಗ್ಗೆ ಒಪ್ಪಿಕೊಂಡಿದೆ.
ತಾನು ತೀವ್ರವಾಗಿ ನೊಂದ ವ್ಯಕ್ತಿಯಾಗಿ ಸದನದ ಮುಂದೆ ನಿಂತಿದ್ದೇನೆ. ಉಗ್ರವಾದ ತಡೆಯುವಲ್ಲಿ ತಾವು ಸರಕಾರದೊಂದಿಗೆ ನಿಲ್ಲುತ್ತೇವೆ. ಆದರೆ, ನಾಗರಿಕರನ್ನು ನಡೆಸಿಕೊಂಡ ಈ ರೀತಿಯನ್ನು ಬೆಂಬಲಿಸಲು ಸಾಧ್ಯವಿಲ್ಲವೆಂದು ಜಮ್ಮು-ಕಾಶ್ಮೀರದ ಕಾಂಗ್ರೆಸ್ ನಾಯಕ ಹೇಳಿದರು.
ಕಾಶ್ಮೀರದ ಬಗ್ಗೆ ಎಲ್ಲ ಪಕ್ಷಗಳೂ ಒಕ್ಕೊರಲಿನಿಂದ ಮಾತನಾಡಿದುದಕ್ಕಾಗಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವುಗಳನ್ನು ಶ್ಲಾಘಿಸಿದ್ದರು. ಕಾಶ್ಮೀರದ ಘಟನೆಗಳ ಕುರಿತು ವಿವಿಧ ಪಕ್ಷಗಳು ನೀಡಿದ ಹೇಳಿಕೆಗಳಿಂದ ದೇಶಕ್ಕೆ ಲಾಭವಾಗಿದೆ. ಇದು ಸರಿಯಾದ ಸಂದೇಶ ನೀಡಿದೆ. ಎಲ್ಲ ಪಕ್ಷಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದವರು ತಿಳಿಸಿದ್ದರು.





