ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ
ವೀರಾಜಪೇಟೆ, ಜು.18: 2016ನೇ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾಗಿರುವ ತಾಲೂಕಿನ ಸರಕಾರಿ ನೌಕರರ ಮಕ್ಕಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ಚಾರ್ಲ್ಸ್ ಡಿಸೋಜ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಶ್ರದ್ಧೆಯೊಂದಿಗೆ ಭಕ್ತಿ ಕೂಡ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಭಯ, ಭಕ್ತಿ, ಶ್ರದ್ಧೆಯನ್ನು ಅಳವಡಿಸಿಕೊಂಡು ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಒಳ್ಳೆಯ ಕನಸುಗಳನ್ನು ಕಾಣುತ್ತಾ ಅವುಗಳನ್ನು ನನಸು ಮಾಡಿಕೊಳ್ಳಲು ಕಠಿಣ ಪರಿಶ್ರಮ ವಹಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಚೊಟ್ಟೆಯಂಡಮಾಡ ಎನ್. ವಿಶ್ವನಾಥ್ ಅವರು ಸಂಘದ ವತಿಯಿಂದ ಇದು ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವಾಗಿದೆ. ಇನ್ನು ಮುಂದೆಯೂ ಕೂಡ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಳ್ಳೆಯ ಕೀರ್ತಿ ತಂದವರನ್ನು ಸಂಘದ ವತಿಯಿಂದ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.
ನಿಹಾರಿಕಾ, ನಿಧಿ ಮದನ್ ಹಾಗೂ ರಿಷಿಕಾ ಸೇರಿದಂತೆ ಎಸೆಸೆಲ್ಸಿಯಲ್ಲಿ ಪ್ರಥಮ, ದ್ವೀತಿಯ, ತೃತೀಯ ಹಾಗೂ ಪಿಯುಸಿಯಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡುತ್ತಿದ್ದ ರೀತಿ ಹಾಗೂ ತಮ್ಮ ಅನುಭವಗಳನ್ನು ಹೇಳಿಕೊಂಡರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಚ್.ಕೆ. ಮೊಗಪ್ಪ, ಸಂಘಟನಾ ಕಾರ್ಯದರ್ಶಿ ಸಿ.ಕೆ. ಭಾಗ್ಯಲಕ್ಷ್ಮಿ, ರಾಜ್ಯ ಪರಿಷತ್ ಸದಸ್ಯರಾದ ಕೆ.ಕೆ.ವೇಣುಗೋಪಾಲ್, ಹಿರಿಯ ನಿರ್ದೇಶಕರಾದ ಪಿ.ವಿ. ವಿಶ್ವನಾಥ್, ಕಾರ್ಯದರ್ಶಿ ಶರೀನ್, ಲಲಿತ, ದಮಯಂತಿ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶರೀನ್ ಪ್ರಾರ್ಥಿಸಿದರು. ನಿರ್ದೆಶಕರಾದ ಮಂಜುನಾಥ್ ನಿರೂಪಿಸಿ, ವಂದಿಸಿದರು.







