ಪತ್ರಕರ್ತರ ಜವಾಬ್ದಾರಿ ಮಹತ್ವವಾದುದು: ಆರ್.ವಿ.ದೇಶಪಾಂಡೆ

ಹೊನ್ನಾವರ, ಜು.18: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರದ ಅಭಿವೃದ್ಧಿ, ಐಕ್ಯತೆೆ ಮತ್ತು ಸಾಮಾಜಿಕ ನ್ಯಾಯ ನೀಡುವಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ವವಾದುದು ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ಹೊನ್ನಾವರ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಗಳಲ್ಲಿ ಅಭಿವೃದ್ಧಿಪರ ಚಿಂತನೆ ನಡೆಯಬೇಕು. ಕೇವಲ ರಾಜಕೀಯ ಸುದ್ದಿಗಳಿರಬಾರದು. ಇಂದು ಸಮಾಜಕ್ಕೆ ಉತ್ತಮ ಪತ್ರಕರ್ತರ ಆವಶ್ಯಕತೆಯಿದೆ. ಅಂತಹವರನ್ನು ಗುರುತಿಸಿ ಉತ್ತೇಜನ ಕೊಡುವ ಕೆಲಸವಾಗಬೇಕು. ಉತ್ತಮ ಬರಹಗಳಿಂದ ಉತ್ತಮ ಸಮಾಜ ನಿರ್ಮಾಣವಾಗುವುದು ಎಂದರು.
ಹಿರಿಯ ಪತ್ರಕರ್ತ ಜಿ.ಯು.ಭಟ್ ಪ್ರಾಸ್ತಾವಿಕ ಮಾತನಾಡಿ, ರಾಜಕಾರಣಿಗಳು ಪತ್ರಕರ್ತರ ಬರಹಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅವುಗಳಂತೆಯೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಮುಂದೆಯೂ ಹೀಗೆ ರಾಜಕಾರಣಿ ಹಾಗೂ ಪತ್ರಕರ್ತರಿಗೆೆ ಒಳ್ಳೆಯ ಸಹಕಾರದೊಂದಿಗೆ ಉತ್ತಮ ಕಾರ್ಯಗಳು ಮುಂದುವರೆಯಲಿ. ಹಾಗೆಯೇ ಪತ್ರಕರ್ತರಿಗೂ ಸರಕಾರ ಸೂಕ್ತ ಸೌಲಭ್ಯ ಮತ್ತು ಭದ್ರತೆ ಒದಗಿಸಲು ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಮರಾವ್ ಪ್ರಶಸ್ತಿ ಮತ್ತು ಜಿ.ಆರ್.
ಪಾಂಡೇಶ್ವರ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ಅಜ್ಜಿಬಳ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೃಷ್ಣಮೂರ್ತಿ ಭಟ್ ಮತ್ತು ಪತ್ರಿಕಾ ಛಾಯಾಗ್ರಾಹಕ ಭವಾನಿ ಹೊನ್ನಾವರ ಅವರನ್ನು ಸನ್ಮಾನಿಸಲಾಯಿತು.
ಆದಿತ್ಯ ಜಿ. ಭಟ್ ಅವರ ಅಂಕಣ ಬರಹಗಳ ಸಂಕಲನ ‘ನಮೋ ರಾಗ ಪ್ರಜಾತಾಳ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ ಸ್ವಾಗತಿಸಿದರು. ಪತ್ರಕರ್ತ ಎಂ.ಜಿ.ಹೆಗಡೆ ವಂದಿಸಿದರು. ಸಂಘದ ಕಾರ್ಯದರ್ಶಿ ಸತೀಶ ತಾಂಡೇಲ, ಪತ್ರಕರ್ತರಾದ ಎಚ್.ಎಂ.ಮಾರುತಿ, ಜಿ.ಎಚ್.ನಾಯ್ಕ, ಗಜು ಗೋಕರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.







