ಕಲಾ ಜಾಥಾಕ್ಕೆ ಚಾಲನೆ
ನಾಲ್ಕ ನೆ ವರ್ಷದೆಡೆಗೆ ಭರವಸೆ ನಡಿಗೆ

ಕಾರವಾರ, ಜು.18: ಸರಕಾರದ ಜನಪರ ಯೋಜನೆಗಳ ಮಾಹಿತಿಯನ್ನು ಗ್ರಾಮೀಣರಿಗೆ ತಲುಪಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ನಾಲ್ಕನೇ ವರ್ಷದೆಡೆಗೆ ಭರವಸೆ ನಡಿಗೆ ಕಲಾ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಅನ್ನಭಾಗ್ಯ, ಕೃಷಿಭಾಗ್ಯ, ಆರೋಗ್ಯ ಭಾಗ್ಯ, ಋಣಮುಕ್ತ, ವಿದ್ಯಾಸಿರಿ, ಮೈತ್ರಿ, ಪಶುಭಾಗ್ಯ, ಕೃಷಿಯಂತ್ರಧಾರೆ, ಕೃಷಿಹೊಂಡ ಸೇರಿದಂತೆ ಹತ್ತಾರು ಯೋಜನೆಗಳ ಮಾಹಿತಿಯನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವ ಉದ್ದೇಶದಿಂದ ಕಲಾಜಾಥ ಹಮ್ಮಿಕೊಳ್ಳಲಾಗಿದೆ. ಯೋಜನೆಗಳ ಕುರಿತು ಪ್ರತಿಯೊಬ್ಬರೂ ಮಾಹಿತಿಯನ್ನು ಪಡೆದು ಪ್ರಯೋಜನ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಹಳಿಯಾಳ ಮತ್ತು ಮುಂಡಗೋಡು ತಾಲೂಕುಗಳ ಆಯ್ದ 30 ಹಳ್ಳಿಗಳಲ್ಲಿ ಮುಂದಿನ 15 ದಿನಗಳ ಕಾಲ ಕಲಾಜಾಥ ನಡೆಯಲಿದೆ. ವಿಶೇಷವಾಗಿ ಸಿದ್ಧಗೊಳಿಸಲಾಗಿರುವ ವಾಹನದಲ್ಲಿ ಕಲಾವಿದರು ಗಾಯನ ಹಾಗೂ ಬೀದಿನಾಟಕ ಮೂಲಕ ಜನರಿಗೆ ಮಾಹಿತಿ ಒದಗಿಸುವ ಕಾರ್ಯ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ರಸಾದ್ ಮನೋಹರ, ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





