ಸರಕಾರಿ ಶಾಲೆ ಮುಚ್ಚುವ ಸರಕಾರದ ನಿಲುವು ಖಂಡನೀಯ
ವರ್ಗಾವಣೆ ನೀತಿ ಖಂಡಿಸಿ ಪ್ರತಿಭಟನೆ
.jpg)
ಸಾಗರ, ಜು.18: ಹಂತ ಹಂತವಾಗಿ ಸರಕಾರಿ ಶಾಲೆಯನ್ನು ಮುಚ್ಚುವ ಸರಕಾರದ ನಿಲುವು ಖಂಡನೀಯ. ಅವೈಜ್ಞಾನಿಕ ಕೌನ್ಸ್ಸೆಲಿಂಗ್ ಪದ್ದತಿಯನ್ನು ತಕ್ಷಣ ನಿಲ್ಲಿಸದೆ ಹೋದರೆ ಉಗ್ರ ಪ್ರತಿಭಟನೆ ಅನಿವಾರ್ಯ ಎಂದು ಶಾಲಾ ಮೇಲುಸ್ತುವಾರಿ ಸಮಿತಿ ರಾಜ್ಯ ಸಮಿತಿ ಸದಸ್ಯ ಕಬಸೆ ಅಶೋಕಮೂರ್ತಿ ಹೇಳಿದರು. ಇಲ್ಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಆಶ್ರಯದಲ್ಲಿ ಸೋಮವಾರ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ವರ್ಗಾವಣೆ ನೀತಿಯನ್ನು ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕಳೆದ ವರ್ಷದ ಮಕ್ಕಳ ಸಂಖ್ಯೆಯನ್ನು ಇರಿಸಿಕೊಂಡು ಕೌನ್ಸೆಲಿಂಗ್ ಮಾಡುತ್ತಿರುವುದನ್ನು ತಕ್ಷಣ ರದ್ದುಪಡಿಸಬೇಕು. ಸರಕಾರಿ ಶಾಲೆಯ ಅಕ್ಕಪಕ್ಕದಲ್ಲಿ ಖಾಸಗಿ ಶಾಲೆಗಳಿಗೆ ನೀಡುತ್ತಿರುವ ಅನುಮತಿಯನ್ನು ತಕ್ಷಣ ನಿಲ್ಲಿಸಿ, ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು. ತರಗತಿ ಹಾಗೂ ವಿಷಯಕ್ಕೊಬ್ಬರು ಶಿಕ್ಷಕರು, ಪ್ರತಿ ಶಾಲೆಗೆ ಮುಖ್ಯ ಶಿಕ್ಷಕರೊಬ್ಬರನ್ನು ನೇಮಿಸುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಇರುವ ಬಹುತೇಕ ಖಾಸಗಿ ಶಾಲಾ ಕಾಲೇಜುಗಳನ್ನು ಜನಪ್ರತಿನಿಧಿಗಳು ನಡೆಸುತ್ತಿದ್ದಾರೆ. ಅಧಿಕಾರಿಗಳು ಸಹ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಪ್ರವೃತ್ತಿ ನಡೆಯುತ್ತಿದೆ. ಲಕ್ಷಾಂತರ ಬಡ ಮಕ್ಕಳು ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರಕಾರಿ ಶಾಲೆಗೆ ಅಧಿಕಾರಿಗಳ ಮಕ್ಕಳು ಸೇರುತ್ತಿಲ್ಲ. ಇದರಿಂದ ಸರಕಾರಿ ಶಾಲೆಯ ಸ್ಥಿತಿಗತಿ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅರಿವಿಲ್ಲ ಎಂದರು. ವೇದಿಕೆಯ ಮಹಿಳಾ ಪ್ರತಿನಿಧಿ ಹೇಮಾ ಮಾತನಾಡಿ, ಸರಕಾರ ಏಕರೂಪದ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು. ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಪೋಷಕರು ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಡಾ. ನಿರಂಜನ ಆರಾಧ್ಯ ಅವರ ನೇತೃತ್ವದಲ್ಲಿ ಸರಕಾರಿ ಶಾಲೆಯ ಸ್ಥಿತಿಗತಿ ಸುಧಾರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅದನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು ಎಂದರು
ಈ ಸಂದರ್ಭದಲ್ಲಿ ದಸಂಸದ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ರೈತ ಸಂಘದ ಅಧ್ಯಕ್ಷ ಚಂದ್ರಶೇಖರ ಗೂರಲಕೆರೆ, ಜನಸಂಗ್ರಾಮ ಪರಿಷತ್‌ನ ಎನ್.ಸಿ.ಗಂಗಾಧರ ಗೌಡ ಮತ್ತಿತರರು ಮಾತನಾಡಿದರು. ಪ್ರಮುಖರಾದ ರಝಿಯಾ, ಮೋಹನ್, ವಿ.ಶಂಕರ್, ವಿನಾಯಕ ಗುಡಿಗಾರ್, ಬಾಲಚಂದ್ರ ಗೌಡ, ಟಿ.ವಿ.ಮಲ್ಲೇಶಪ್ಪ, ನಾಗರಾಜ್, ಐ.ಎನ್.ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.







