ಸರಕಾರಿ ಶಾಲೆಗಳ ಉಳಿವಿಗಾಗಿ ಜಾಥಾ

ತರೀಕೆರೆ, ಜು.18: ಪಟ್ಟಣದಲ್ಲಿ ಇತ್ತೀಚೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸಮಾನ ಶಿಕ್ಷಣ ಜಾರಿಗೆ ಒತ್ತಾಯಿಸಿ ಹಾಗೂ ಸರಕಾರಿ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲು ಕೇಂದ್ರ, ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಹಕ್ಕೊತ್ತಾಯ ಜಾಥಾ ಮೂಲಕ ಮನವಿ ಸಲ್ಲಿಸಲಾಯಿತು.
ಸ್ವಾತಂತ್ರ್ಯಬಂದು 69 ವರ್ಷಗಳು ಕಳೆದರೂ ಉತ್ತಮ ಶಿಕ್ಷಣವನ್ನು ಪ್ರಜೆಗಳಿಗೆ ನೀಡುವಲ್ಲಿ ಸರಕಾರ ವಿಫಲವಾಗಿವೆ. ಕೇಂದ್ರ ಸರಕಾರವು ರಾಷ್ಟ್ರೀಯ ಶಿಕ್ಷಣ ಕರಡು ನೀತಿಯನ್ನು ಪ್ರಕಟಿಸಲು ಸಿದ್ಧತೆ ನಡೆಸಿರುವ ಈ ಸಂದಭರ್ದಲ್ಲಿ ಹಲವು ಬೇಡಿಕೆಗಳನ್ನು ಸ್ವೀಕರಿಸಬೇಕೆಂದು ಒತ್ತಾಯಿಸಿದರು.
ಸಂವಿಧಾನದ ಪರಿಚ್ಛೇದ 21(ಎ) ಅನ್ವಯ ಗುಣಮಟ್ಟದ ಶಿಕ್ಷಣ ಜಾರಿಯಾಗಬೇಕು. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿ ಮಾತೃಭಾಷೆಯನ್ನು ಕಡ್ಡಾಯಗೊಳಿಸಬೇಕು. ಏಕ ರೂಪ (ಸಮಾನ) ಶಿಕ್ಷಣ ಜಾರಿಯಾಗಬೇಕು. ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರಗಳೊಂದಿಗೆ ಚರ್ಚಿಸಿ ಮಾತೃ ಭಾಷೆ ಕಡ್ಡಾಯಗೊಳಿಸಲು ಇರುವ ಕಾನೂನು ತೊಡಕುಗಳನ್ನು ಸಂವಿಧಾನ ತಿದ್ದುಪಡಿಯ ಮೂಲಕ ನಿವಾರಿಸಬೇಕು.
ಮಾತೃ ಭಾಷಾ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗ ಭದ್ರತೆಯ ಅವಕಾಶಕ್ಕಾಗಿ ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕಡ್ಡಾಯ ಮೀಸಲಾತಿ ಜಾರಿಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದರು. ಜಾಥಾಕ್ಕೆ ಸಾಹಿತಿ ಕು.ಸ.ಮಧುಸೂದನ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಪದ್ಮಾವತಿ, ಪುರಸಭೆ ಉಪಾಧ್ಯಕ್ಷೆ ಅನ್ನಪೂರ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ, ತಾಲೂಕು ಕಸಾಪ ಅಧ್ಯಕ್ಷ ದಾದಾಪೀರ್, ರಾಮಪ್ಪ, ಪರುಶುರಾಂ, ಕೃಷ್ಣನಾಯ್ಕ, ಎ.ಆರ್.ಕೆ.ಶ್ರೀನಿವಾಸ್, ಸಿದ್ರಾಮಪ್ಪ, ಸೇರಿದಂತೆ ಹಲವರು ಭಾಗವಹಿಸಿದ್ದರು.







