ಮೃತ ಟೆಕ್ಕಿಯ ಅಂತ್ಯಸಂಸ್ಕಾರಕ್ಕೆ ಕೋಮಾ ಸ್ಥಿತಿಯಲ್ಲಿರುವ ಪತ್ನಿಯ ಒಪ್ಪಿಗೆ ಅಲಭ್ಯ,ಶವವನ್ನು ಹೂಳುವ ಸಾಧ್ಯತೆ
ಅಮೆರಿಕದಲ್ಲಿ ಭಾರತೀಯ ಟೆಕ್ಕಿ ಕುಟುಂಬದ ದುರಂತ

ಹೊಸದಿಲ್ಲಿ,ಜು.18: ಅಮೆರಿಕದಲ್ಲಿ ನೆಲೆಗೊಂಡಿದ್ದ ಐಟಿ ಉದ್ಯೋಗಿ, ಮಹಾರಾಷ್ಟ್ರದ ಕಲ್ಯಾಣ ಮೂಲದ ಚಂದನ್ ಗವಾಯಿ(38) ಅವರ ಸುಂದರ ಸಂಸಾರಕ್ಕೆ ಜುಲೈ 4ರಂದು ಬರಸಿಡಿಲು ಎರಗಿತ್ತು. ಅಂದು ನ್ಯೂಯಾರ್ಕ್‌ನಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಚಂದನ್,ತಂದೆ ಕಮಲನಯನ ಗವಾಯಿ(74) ಮತ್ತು ತಾಯಿ ಅರ್ಚನಾ ಗವಾಯಿ(60) ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ತೀವ್ರ ಸುಟ್ಟಗಾಯಗಳಾಗಿ ತಲೆಗೆ ತೀವ್ರ ಏಟು ಬಿದ್ದಿರುವ ಪತ್ನಿ ಮನೀಷಾ ಸರ್ವದೆ(32) ಆಸ್ಪತ್ರೆಯಲ್ಲಿ ಕೋಮಾಸ್ಥಿತಿಯಲ್ಲಿದ್ದಾರೆ. ದಂಪತಿಯ 11 ತಿಂಗಳ ಗಂಡುಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದೆ. ಅಮೆರಿಕದ ಕಾನೂನಿನಂತೆ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮುನ್ನ ಆತನ ಪತ್ನಿಯ ಒಪ್ಪಿಗೆ ಅತ್ಯಗತ್ಯವಾಗಿದೆ. ಮನೀಷಾ ಪತಿಯ ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ ನೀಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಚಂದನ್ ಮೃತದೇಹವನ್ನು ಹೂಳುವ ಸಾಧ್ಯತೆಯಿದೆ.
ಮನೀಷಾ ಕೋಮಾಸ್ಥಿತಿಯಿಂದ ಹೊರಗೆ ಬರುವವರೆಗೂ ಚಂದನ್ ಮೃತದೇಹವನ್ನು ಹೂಳಬಹುದಾಗಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ರಿವಾ ಗಂಗೂಲಿ ಅವರು ಪ್ರಸ್ತಾವಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ರವಿವಾರ ಟ್ವಿಟರ್ ಸಂದೇಶದಲ್ಲಿ ತಿಳಿಸಿದ್ದಾರೆ.
ಜು.4ರಂದು ಸುಡುಮದ್ದು ಪ್ರದರ್ಶನ ನೋಡಿ ಮನೆಗೆ ವಾಪಸಾಗುತ್ತಿದ್ದ ಗವಾಯಿ ಕುಟುಂಬದ ಕಾರಿಗೆ ಪಿಕಪ್ ಟ್ರಕ್ ಢಿಕ್ಕಿ ಹೊಡೆದಿತ್ತು. ತಕ್ಷಣ ಎರಡೂ ವಾಹನಗಳು ಹೊತ್ತಿ ಉರಿದಿದ್ದವು. ಘಟನೆಯಲ್ಲಿ ಟ್ರಕ್ ಚಾಲಕನೂ ಮೃತಪಟ್ಟಿದ್ದ.
ಚಂದನ್ ಹೆತ್ತವರ ಅಂತ್ಯಸಂಸ್ಕಾರವನ್ನು ಅಮೆರಿಕದಲ್ಲಿಯೇ ನಡೆಸಲಾಗುವುದು. ಮನೀಷಾ ಕೋಮಾಸ್ಥಿತಿಯಿಂದ ಹೊರಗೆ ಬರುವವರೆಗೂ ಚಂದನ್ ಮೃತದೇಹವನ್ನು ಹೂಳಲಾಗುವುದು. ಮನೀಷಾ ಒಪ್ಪಿಗೆ ನೀಡಿದ ಬಳಿಕ ಮೃತದೇಹವನ್ನು ಹೊರಗೆ ತೆಗೆದು ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಸುಷ್ಮಾ ಟ್ವೀಟಿಸಿದ್ದಾರೆ.
ಮೃತ ಎಲ್ಲ ಮೂವರ ಮರಣ ಪ್ರಮಾಣಪತ್ರಗಳನ್ನು ನೀಡಲಾಗುವುದು ಮತ್ತು ವಿಮೆಹಣವನ್ನು ಪಡೆಯಲು ಕುಟುಂಬಕ್ಕೆ ಎಲ್ಲ ನೆರವು ಒದಗಿಸಲಾಗುವುದು ಎಂದಿದ್ದಾರೆ.
ಕಾನ್ಸುಲ್ ಜನರಲ್‌ರ ಪ್ರಸ್ತಾವನೆಗೆ ಗವಾಯಿ ಕುಟುಂಬದ ಎಲ್ಲರೂ ಒಪ್ಪಿಕೊಳ್ಳಲಿದ್ದಾರೆ ಎಂದೂ ಅವರು ಹೇಳಿದ್ದಾರೆ.







