ಮೂಲಸೌಕರ್ಯ ಕಾಣದ ಶಿವಮೊಗ್ಗ ಆಶ್ರಯ ಕಾಲನಿ
ಶಿವಮೊಗ್ಗ, ಜು. 18: ಶಿವಮೊಗ್ಗ ನಗರದ ಮಹಾನಗರ ಪಾಲಿಕೆ 1 ನೆ ವಾರ್ಡ್‌ನ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಎಚ್ ಬ್ಲಾಕ್‌ನಲ್ಲಿ ಮೂಲಸೌಕರ್ಯ ಕೊರತೆಯ ಜೊತೆಗೆ ವಿದ್ಯುತ್ ಸಂಪರ್ಕವೂ ಇಲ್ಲದೆ ನಾಗರಿಕರು ಪರದಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನ ಚಂದ್ರಲೋಕಕ್ಕೆ ಸಂಚರಿಸುತ್ತಿರುವ ಈ ಕಾಲದಲ್ಲೂ ಈ ಬಡಾವಣೆಯಲ್ಲಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಬಡ ನಾಗರಿಕರು ಕತ್ತಲಿನಲ್ಲಿಯೇ ಜೀವನ ನಡೆಸುವಂತಾಗಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಮಹಾನಗರ ಪಾಲಿಕೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಇದರಿಂದ ರೋಸಿ ಹೋಗಿರುವ ನಿವಾಸಿಗಳು ತಮ್ಮ ಬಡಾವಣೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಚೆನ್ನಬಸಪ್ಪಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸೌಲಭ್ಯ ವಿಲ್ಲ: ಬಡವರಿಗಾಗಿ 20್ಡ30 ಅಳತೆಯ ಖಾಲಿ ನಿವೇಶನ ಹಂಚಿಕೆ ಮಾಡಿದ ಸರಕಾರ ಮನೆ ಕಟ್ಟಿಸಿ ಕೊಟ್ಟಿದೆ. ಸುಮಾರು 221 ಮನೆಗಳ ನಿರ್ಮಾಣ ಈ ಪರಿಸರದಲ್ಲಿ ಮಾಡಲಾಗಿದೆ. ಈಗಾಗಲೇ ಹಲವು ಮನೆಗಳಲ್ಲಿ ಫಲಾನುಭವಿಗಳು ವಾಸಿಸಲಾರಂಭಿಸಿದ್ದಾರೆ. ಆದರೆ, ಈ ವರೆಗೂ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಸೇರಿದಂತೆ ಕನಿಷ್ಠ ಮೂಲಸೌಕರ್ಯ ಕಲ್ಪಿಸುವ ಕೆಲಸವಾಗಿಲ್ಲ ಎಂದು ಧರಣಿ ನಿರತರು ದೂರಿದ್ದಾರೆ.
ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷತನದಿಂದಾಗಿ ಮೂಲ ಸೌಕರ್ಯಗಳಿಲ್ಲದ ಕಾರಣ ಮನೆಗಳಲ್ಲಿ ವಾಸಿಸಲು ಹಲವು ಫಲಾನುಭವಿಗಳು ಬಂದಿಲ್ಲ. ಮತ್ತೊಂದೆಡೆ ಮನೆಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳು ನಾನಾ ರೀತಿಯ ತೊಂದರೆ ಎದುರಿಸುತ್ತಿದ್ದು, ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲದಂತಹ ಸ್ಥಿತಿಗೆ ತಲುಪಿರುವುದಾಗಿ ಧರಣಿನಿರತರು ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.
ಮಳೆಯ ವೇಳೆ ಮನೆಗಳು ಸೋರುತ್ತಿವೆ. ಕಳ್ಳರು, ಪುಂಡರ ಹಾವಳಿ ವಿಪರೀತವಾಗಿದೆ. ಕೆಲ ಕಿಡಿಗೇಡಿಗಳು ಮನೆಗಳ ಬೀಗ ಮುರಿದು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಸರು ಗುಂಡಿಯಾಗಿ ಮಾರ್ಪಟ್ಟಿದೆ ಎಂದು ಧರಣಿ ನಿರತರು ಆಪಾದಿಸಿದ್ದಾರೆ. ಬಡಾವಣೆಯಲ್ಲಿ ಮನೆ ಮಾಡಿರುವ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಈಗಾಗಲೇ ಸ್ಥಳೀಯ ಶಾಸಕರು, ಕಾರ್ಪೊರೇಟರ್ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಿಲ್ಲವಾಗಿದೆ. ನಿವಾಸಿಗಳ ಗೋಳು ಕೇಳುವವರ್ಯಾರು ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಜಿಲ್ಲಾಡಳಿತವು ಬಡಾವಣೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಬಡಾವಣೆಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿ ಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಧರಣಿ ನಿರತರು ಅಪರ ಜಿಲ್ಲಾಧಿಕಾರಿ ಯವರಿಗೆ ಹಸ್ತಾಂತರಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಧರಣಿಯಲ್ಲಿ ಗ್ರಾಮದ ಮುಖಂಡರಾದ ಸತ್ಯನಾರಾಯಣ ಜಾಧವ್, ಮಂಜುನಾಥ್, ನರಸಿಂಗ್, ಜಗದೀಶ್, ಸುರೇಶ್, ಗೋವಿಂದರಾಜು, ನಾಗರಾಜ್ ಮೊದಲಾದವರಿದ್ದರು.







