ಸಹಭಾಗಿತ್ವದ ಅಭಿವೃದ್ಧಿಗೆ ರೈತರ ಅಸಹಮತ
ರೈತರೊಂದಿಗಿನ ಸೂಡಾ ಮಾತುಕತೆ ವಿಫಲ
ಶಿವಮೊಗ್ಗ, ಜು. 18: ನಗರದ ಹೊರವಲಯ ಗೋಪಿಶೆಟ್ಟಿಕೊಪ್ಪಗ್ರಾಮದ 104 ಎಕರೆ ಜಮೀನಿನಲ್ಲಿ ಶೇ. 50:50 ರ ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿಗೊಳಿಸುವ ಸಂಬಂಧ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ)ದ ಅಧ್ಯಕ್ಷ ಎನ್. ರಮೇಶ್‌ರವರು ಸೋಮವಾರ ಪ್ರಾಧಿಕಾರದ ಕಚೇರಿಯಲ್ಲಿ ರೈತರೊಂದಿಗೆ ಸಂಧಾನ ಮಾತುಕತೆ ನಡೆಸಿದರು. ಸಭೆಗೆ ಕೆಲ ರೈತರು ಗೈರು ಹಾಜರಾಗಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಕೆಲ ರೈತರು ಬಡಾವಣೆ ಅಭಿವೃದ್ಧಿಗೆ ತಮ್ಮ ಜಮೀನುಗಳನ್ನು ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ. ಒಪ್ಪಿಗೆ ಸೂಚಿಸಿದ ರೈತರ ಜಮೀನುಗಳನ್ನು ಶೇ. 50:50 ರ ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಸೂಡಾ ಆಡಳಿತ ನಿರ್ಧರಿಸಿದೆ. ಸಹಮತ: ಗೋಪಿಶೆಟ್ಟಿಕೊಪ್ಪ ಗ್ರಾಮದ 104 ಎಕರೆ ಜಮೀನಿನಲ್ಲಿ ಬಡಾವಣೆ ರಚನೆ ಮಾಡಲು ಈ ಹಿಂದೆ ಪ್ರಾಧಿಕಾರ ನಿರ್ಧರಿಸಿತ್ತು. ಅದರಂತೆ ಭೂ ಸ್ವಾದೀನ ಪ್ರಕ್ರಿಯೆ ನಡೆಸಿತ್ತು. ಬಳಿಕ ರೈತರೊಂದಿಗೆ ನಡೆದ ಹಲವು ಸುತ್ತಿನ ಮಾತುಕತೆಗಳು ಫಲನೀಡದಿದ್ದಾಗ, ಶೇ. 50:50 ರ ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿಗೆ ನಿರ್ಧರಿಸಲಾಗಿತ್ತು ಎಂದು ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್‌ರವರು ತಿಳಿಸಿದ್ದಾರೆ. ಸಭೆಯ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಜಮೀನುಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸಿದ ಶೇ. 50 ರಷ್ಟು ನಿವೇಶನಗಳನ್ನು ನೀಡಲಾಗುತ್ತದೆ. ಉಳಿದ ಶೇ. 50 ರಷ್ಟು ನಿವೇಶನಗಳನ್ನು ಪ್ರಾಧಿಕಾರವು ಸಾರ್ವಜನಿಕರಿಗೆ ಹಂಚಿಕೆ ಮಾಡಲಿದೆ. ಆದರೆ, ಕೆಲ ರೈತರು ಪ್ರಾಧಿಕಾರಕ್ಕೆ ಜಮೀನು ನೀಡಲು ನಿರಾಕರಿಸುತ್ತಿದ್ದಾರೆ. ಮತ್ತೆ ಕೆಲ ರೈತರು ಜಮೀನು ನೀಡಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. ಸಹಮತ ವ್ಯಕ್ತಪಡಿಸಿರುವ ರೈತರ ಜಮೀನುಗಳಲ್ಲಿ ಬಡಾವಣೆ ರಚನೆ ಪ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಒಟ್ಟಾರೆ ಈ ಪ್ರಮಾಣ 40 ರಿಂದ 50 ಎಕರೆಯಷ್ಟಿದೆ. ಜಮೀನು ನೀಡಲು ನಿರಾಕರಿಸುತ್ತಿರುವ ರೈತರ ಮನವೊಲಿಕೆ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಏನಿದು ಪ್ರಕ್ರಿಯೆ:
2010 ರಲ್ಲಿ ಗೋಪಿಶೆಟ್ಟಿಕೊಪ್ಪ ಗ್ರಾಮದ 104 ಎಕರೆ ಜಮೀನನ್ನು ಪ್ರಾಧಿಕಾರವು ವಸತಿ ಉದ್ದೇಶಕ್ಕೆ ಭೂ ಸ್ವಾದೀನ ಪಡಿಸಿಕೊಂಡಿತ್ತು. 2012 ರಲ್ಲಿ ಬಡಾವಣೆ ರಚನೆಗೆ ಸರಕಾರ ಅನುಮತಿ ನೀಡಿತ್ತು. ಇದರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದರು. ಕೆಲ ರೈತರು ನ್ಯಾಯಾಲಯದ ಮೊರೆ ಕೂಡ ಹೋಗಿದ್ದರು. ಇದೆಲ್ಲದರ ನಡುವೆ ಪ್ರಾಧಿಕಾರವು ರೈತರ ಮನವೊಲಿಕೆಗೆ ಹಲವು ಸುತ್ತಿನ ಸಂಧಾನ ಮಾತುಕತೆ ನಡೆಸಿತ್ತು. ಶೇ. 50:50ರ ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿಗೊಳಿಸುವ ನಿರ್ಧಾರ ಮಾಡಿತ್ತು.







