ಐಸಿಸಿ ವಿಶ್ವ ರ್ಯಾಂಕಿಂಗ್: ಯಾಸಿರ್ ನಂ.1 ಬೌಲರ್

ದುಬೈ, ಜು.18: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಪಾಕ್ ಸ್ಪಿನ್ನರ್ ಯಾಸಿರ್ ಷಾ ಐಸಿಸಿ ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ.
ಯಾಸಿರ್ 1996ರ ಡಿಸೆಂಬರ್ ಬಳಿಕ ವಿಶ್ವದ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಪಾಕ್‌ನ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. 1996ರಲ್ಲಿ ಮುಸ್ತಾಕ್ ಅಹ್ಮದ್ ನಂ.1ಬೌಲರ್ ಆಗಿದ್ದರು. ಆಸ್ಟ್ರೇಲಿಯದ ಸ್ಪಿನ್ ದಂತಕತೆ ಶೇನ್ ವಾರ್ನ್(2005) ಬಳಿಕ ನಂ.1 ಸ್ಥಾನ ತಲುಪಿದ ಎರಡನೆ ಸ್ಪಿನ್ನರ್ ಯಾಸಿರ್.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 72 ರನ್‌ಗೆ 6 ವಿಕೆಟ್ ಹಾಗೂ 69 ರನ್‌ಗೆ 4 ವಿಕೆಟ್ ಉಡಾಯಿಸಿದ್ದ ಯಾಸಿರ್ 32 ಅಂಕವನ್ನು ಸಂಪಾದಿಸಿ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಇಂಗ್ಲೆಂಡ್‌ನ ವೇಗದ ಬೌಲರ್‌ಗಳಾದ ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್‌ರನ್ನು ಹಿಂದಿಕ್ಕಿದರು.
ಆ್ಯಂಡರ್ಸನ್ ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಏಷ್ಯಾಖಂಡದಿಂದ ಹೊರಗೆ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ಬಾರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಯಾಸಿರ್ ,ಅಶ್ವಿನ್‌ರಿಂದ 7 ಅಂಕ ಹಾಗೂ ಆ್ಯಂಡರ್ಸನ್‌ರಿಂದ 10 ಅಂಕಗಳಿಂದ ಮುನ್ನಡೆಯಲ್ಲಿದ್ದಾರೆ. 30ರ ಹರೆಯದ ಯಾಸಿರ್‌ಗೆ ಇನ್ನಷ್ಟು ಅಂಕ ಗಳಿಸಲು ಅವಕಾಶವಿದೆ.
ಈ ತನಕ ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ 86 ವಿಕೆಟ್‌ಗಳನ್ನು ಪಡೆದಿರುವ ಯಾಸಿರ್‌ಗೆ ಇಂಗ್ಲೆಂಡ್ ವಿರುದ್ಧ ಸರಣಿಯ ವೇಳೆ 100 ವಿಕೆಟ್ ಪೂರೈಸುವ ಉತ್ತಮ ಅವಕಾಶವಿದೆ.
ಪಾಕ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 102 ರನ್‌ಗೆ ಒಟ್ಟು 11 ವಿಕೆಟ್‌ಗಳನ್ನು ಉಡಾಯಿಸಿದ್ದ ಇಂಗ್ಲೆಂಡ್‌ನ ವೇಗಿ ಕ್ರಿಸ್ ವೋಕ್ಸ್ 28 ಸ್ಥಾನ ಮೇಲಕ್ಕೇರಿದ್ದಾರೆ. ಜೀವನಶ್ರೇಷ್ಠ 36ನೆ ಸ್ಥಾನ ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್ ಪಡೆದಿರುವ ಪಾಕಿಸ್ತಾನದ ರಾಹತ್ ಅಲಿ ಕೂಡಾ 3 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 93ನೆ ಸ್ಥಾನ ತಲುಪಿದ್ದಾರೆ.
ಐಸಿಸಿ ಆಟಗಾರರ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ದಾಂಡಿಗ ಅಸದ್ ಶಫೀಕ್ 2 ಸ್ಥಾನ ಮೇಲಕ್ಕೇರಿ 11ನೆ ಸ್ಥಾನ ತಲುಪಿದ್ದಾರೆ. ಅಸದ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 73 ಹಾಗೂ 49 ರನ್ ಗಳಿಸಿದ್ದರು.
ಆಂಗ್ಲರ ವಿರುದ್ಧ 10ನೆ ಟೆಸ್ಟ್ ಶತಕ ದಾಖಲಿಸಿದ್ದ ಪಾಕಿಸ್ತಾನದ ನಾಯಕ ಮಿಸ್ಬಾವುಲ್ ಹಕ್ ಒಂದು ಸ್ಥಾನ ಮೇಲಕ್ಕೇರಿ 9ನೆ ಸ್ಥಾನ ತಲುಪಿದ್ದಾರೆ.







