ಖಡ್ಸೆ-ದಾವೂದ್ ನಡುವೆ ಕರೆ ವಿನಿಮಯವಾಗಿಲ್ಲ
ಬಾಂಬೆ ಹೈಕೋರ್ಟ್‌ಗೆ ಎಟಿಎಸ್ ವರದಿ
ಮುಂಬೈ, ಜು.18: ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡ್ಸೆ ಹಾಗೂ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹೀಂ ನಡುವೆ ದೂರವಾಣಿ ಕರೆಗಳ ವಿನಿಮಯವಾಗಿರುವುದು ಪತ್ತೆಯಾಗಿಲ್ಲ ಹಾಗೂ ಖಡ್ಸೆಗೆ ಭಯೋತ್ಪಾದಕನೊಂದಿಗೆ ಸಂಬಂಧವಿರುವುದೂ ಕಂಡು ಬಂದಿಲ್ಲವೆಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವಿಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಆದಾಗ್ಯೂ, ತನಿಖೆಯಲ್ಲಿ ಭಯೋತ್ಪಾದಕ ಆಯಾಮ ಪತ್ತೆಯಾಗಿಲ್ಲವಾದರೂ, ಇತರ ಕೆಲವು ನಿರ್ದಿಷ್ಟ ವಿಷಯಗಳು ಬೆಳಕಿಗೆ ಬಂದಿವೆ.ಅವುಗಳನ್ನು ನಗರ ಪೊಲೀಸನ ಸೈಬರ್ ಅಪರಾಧ ಘಟಕದ ಪರಿಣತರೇ ತನಿಖೆ ನಡೆಸಬೇಕಾಗಿದೆ. ಎಟಿಎಸ್ ಅದಕ್ಕೆ ಪ್ರಾಥಮಿಕ ತನಿಖೆಯ ವರದಿಯನ್ನು ನೀಡಲಿದೆ. ಆ ಬಳಿಕ ತನಿಖೆ ನಡೆಸಲಿದೆಯೆಂದು ಎಟಿಎಸ್ ತಿಳಿಸಿದೆ.
ಎಟಿಎಸ್ ಪ್ರಾಥಮಿಕ ತನಿಖೆ ನಡೆಸಿದೆ. ಹ್ಯಾಕರ್ ಒಬ್ಬ ಆರೋಪಿಸಿರುವಂತೆ ಯಾವುದೇ ಭಯೋತ್ಪಾದಕ ಆಯಾಮ ಪತ್ತೆಯಾಗಿಲ್ಲ. ಖಡ್ಸೆ ಹಾಗೂ ದಾವೂದ್ ನಡುವೆ ಯಾವುದೇ ಕರೆಗಳ ವಿನಿಮಯವಾಗಿಲ್ಲವೆಂದು ಎಟಿಎಸ್‌ನ ವಕೀಲ ನಿತಿನ್ ಪ್ರಧಾನ್ ನ್ಯಾಯಮೂರ್ತಿಗಳಾದ ಎನ್.ಎಚ್. ಪಾಟೀಲ್ ಹಾಗೂ ಪಿ.ಡಿ. ನಾಯ್ಕಾರನ್ನೊಳಗೊಂಡ ಪೀಠವೊಂದರ ಮುಂದೆ ಹೇಳಿದರು. ಈ ಪ್ರಕರಣದಲ್ಲಿ ರಾಜ್ಯದ ತನಿಖೆ ಸಂಸ್ಥೆಗಳು ನಿಷ್ಪಕ್ಷಪಾತ ತನಿಖೆ ನಡೆಸಲಾರವು. ಆದುದರಿಂದ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಗುಜರಾತ್ ಮೂಲದ ಹ್ಯಾಕರ್ ಮನೀಶ್ ಭಂಗಲೆ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿತ್ತು.
ತಾನು ನೀಡಿದ್ದ ಮಾಹಿತಿಯನ್ನು ರಾಜ್ಯದ ಯಂತ್ರಾಂಗ ಲಘುವಾಗಿ ಪರಿಗಣಿಸಿತೆಂಬ ಅರ್ಜಿದಾರನ ಪ್ರತಿಪಾದನೆ ಸರಿಯಲ್ಲ. ತಾವು ಅಗತ್ಯವಾದುದನ್ನು ಮಾಡುತ್ತಿದ್ದೇವೆ. ಸಿಬಿಐ ತನಿಖೆ ಅನವಶ್ಯವೆಂದು ಪ್ರಧಾನ್ ವಾದಿಸಿದರು. ಪ್ರಧಾನ್‌ರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ಅಗತ್ಯವಾದಾಗ ಅಪರಾಧ ವಿಭಾಗದ ಮುಂದೆ ಹಾಜರಾಗಿ ಅವರಲ್ಲಿರುವ ಮಾಹಿತಿಯನ್ನು ಒದಗಿಸುವಂತೆ ಭಂಗಲೆಗೆ ನಿರ್ದೇಶನ ನೀಡಿತು.
ತನಗೆ ಪ್ರಾಣ ಬೆದರಿಕೆಯಿದೆಯೆಂಬ ಭಂಗಲೆಯ ಆರೋಪದ ಕುರಿತು, ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಬಹುದು. ಅವರು ಅರ್ಹತೆಯ ಮೇಲೆ ಅದನ್ನು ನಿರ್ಧರಿಸುತ್ತಾರೆಂದು ಹೈಕೋರ್ಟ್ ಸಲಹೆ ಮಾಡಿತು.







