ಗಂಗಾ ನದಿಯನ್ನು ಮಲಿನಗೊಳಿಸುವವರನ್ನು ಶಿಕ್ಷಿಸಲು ಶೀಘ್ರವೇ ಕಾಯ್ದೆ: ಉಮಾಭಾರತಿ
ಹೊಸದಿಲ್ಲಿ, ಜು.18: ಗಂಗಾ ನದಿಯನ್ನು ಮಲಿನಗೊಳಿಸುವವರನ್ನು ಶಿಕ್ಷಿಸಲು ಸರಕಾರವು ಶೀಘ್ರವೇ ಕಾಯ್ದೆಯೊಂದನ್ನು ತರುವ ಚಿಂತನೆ ಯಲ್ಲಿದೆಯೆಂದು ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಪುನರುಜ್ಜೀವನ ಸಚಿವೆ ಉಮಾಭಾರತಿ ಸೋಮವಾರ ತಿಳಿಸಿದ್ದಾರೆ.
ಗಂಗಾ ನದಿಯನ್ನು ಮಲಿನಗೊಳಿಸುತ್ತಿರುವ ಕೈಗಾರಿಕೆಗಳನ್ನು ಶಿಕ್ಷಿಸಲಾಗುವುದೇ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರನೀಡಿದ ಅವರು, ಗಂಗಾ ನದಿಯ ದಡಗಳಲ್ಲಿ 764 ಕೈಗಾರಿಕೆಗಳಿದ್ದು, ಅವು ನದಿಯನ್ನು ಮಲಿನಗೊಳಿಸುತ್ತಿವೆ. ಕೆಲವು ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ತಮ್ಮ ಸರಕಾರ ಬದ್ಧವಿದೆಯೆಂದರು.
ಈ ಸಂಬಂಧ ರಾಜ್ಯ ಸರಕಾರ ಗಳೊಂದಿಗೆ ಸಮಾಲೋಚಿಸಿ ತಾವು ಕಾಯ್ದೆ ಯೊಂದನ್ನು ಪ್ರಸ್ತಾವಿಸಲಿದ್ದೇ ವೆಂದು ಉಮಾಭಾರತಿ ಹೇಳಿದರು.
ಒಂದು ಬೀಡಿ ಕದ್ದರೆ ಬಡವರು ಜೈಲಿಗೆ ಹೋಗಬೇಕಾಗುತ್ತದೆ. ಆದರೆ, ಗಂಗೆಯನ್ನು ಮಲಿನ ಮಾಡಿದವರನ್ನು ಜೈಲಿಗೆ ಕಳುಹಿಸಲಾಗುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೂಗಳಂತಹ ಪೂಜಾ ಸಾಮಗ್ರಿ ಗಳನ್ನೆಸೆಯು ವುದರಿಂದಲೂ ಗಂಗೆ ಮಲಿನಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, ಪೂಜಾ ಸಾಮಗ್ರಿಗಳಿಂದ ಗಂಗಾನದಿ ಮಲಿನಗೊಳ್ಳುವುದಿಲ್ಲ. ಆದರೆ, ಕೈಗಾರಿಕಾ ತ್ಯಾಜ್ಯ, ಚರಂಡಿ ನೀರು ಹಾಗೂ ಪ್ಲಾಸ್ಟಿಕ್ ಅದನ್ನು ಪ್ರದೂಷಣಗೊಳಿಸುತ್ತವೆಯೆಂದು ಉಮಾಭಾರತಿ ಉತ್ತರಿಸಿದರು.
ಆದಾಗ್ಯೂ, ಪೂಜಾ ಸಾಮಗ್ರಿಗಳು ನಿಂತ ನೀರಿನಲ್ಲಿ ಕೊಳೆತು ಸ್ವಲ್ಪಮಟ್ಟಿನ ಮಾಲಿನ್ಯ ಉಂಟುಮಾಡುತ್ತಿರುವುದು ನಿಜವೆಂದು ಅವರು ಹೇಳಿದರು.
ಗಂಗಾನದಿ ಪವಿತ್ರವಾದುದು. ಆದರೆ ರಾಸಾಯನಿಕವಾಗಿ ಅದು ಶುದ್ಧವಾಗಿಲ್ಲ. ನದಿಯ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದರೆ, ಅದರಲ್ಲಿರುವ ರಾಸಾಯನಿಕ ಅಂಶಗಳ ಕಾರಣದಿಂದ ಅದು ಶುದ್ಧವಾಗಿಲ್ಲ. ಆದರೆ ಗೌರವದ ದೃಷ್ಟಿಯಿಂದ ಗಂಗೆ ಪವಿತ್ರವೆಂದು ಉಮಾಭಾರತಿ ತಿಳಿಸಿದರು.





