ಅಕ್ರಮ ಆನ್‌ಲೈನ್ ಪ್ರಾಣಿ ಮಾರಾಟದ ವಿರುದ್ಧ ಕ್ರಮ: ದವೆ
ಹೊಸದಿಲ್ಲಿ, ಜು.18: ಅಪೂರ್ವ ಪ್ರಾಣಿಗಳು ಹಾಗೂ ಅವುಗಳ ದೇಹ ಭಾಗಗಳ ವ್ಯಾಪಾರವು ಕ್ವಿಕ್ರ್, ಒಎಲ್‌ಎಕ್ಸ್, ಅಮೇಜಾನ್ ಹಾಗೂ ಯುಟ್ಯೂಬ್‌ಗಳಂತಹ ಜನಪ್ರಿಯ ಜಾಲ ತಾಣಗಳ ಮೂಲಕ ನಡೆಯುತ್ತಿದೆಯೆಂದು ಸರಕಾರವಿಂದು ಹೇಳಿದೆ.
ಸೈಬರ್ ಅಪರಾಧದ ವಿರುದ್ಧ ಹೋರಾಟದ ಭಾಗವಾಗಿ, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅಪೂರ್ವ ಪ್ರಾಣಿಗಳು ಹಾಗೂ ಅವುಗಳ ಅಂಗಭಾಗಳ ಆನ್‌ಲೈನ್ ಕಳ್ಳ ಸಾಗಾಟದ ಮೇಲೆ ನಿಗಾ ಇರಿಸಿವೆಯೆಂದು ಪರಿಸರ ಸಚಿವ ಅನಿಲ್ ಮಾಧವ್ ದವೆ ರಾಜ್ಯಸಭೆಗಿಂದು ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.
ಅನೇಕ ಜಾಲತಾಣಗಳು ಅಪೂರ್ವ ಪ್ರಾಣಿಗಳು ಹಾಗೂ ಅವುಗಳ ಅಂಗಭಾಗಳ ಮಾರಾಟದ ಬಗ್ಗೆ ಜಾಹೀರಾತುಗಳನ್ನು ನೀಡುತ್ತಿರುವುದು ಕಂಡುಬಂದಿದೆಯೆಂದ ಅವರು, ಪ್ರಾಣಿ ಅಪರಾಧ ನಿಯಂತ್ರಣ ಬ್ಯೂರೊ (ಡಬ್ಲುಸಿಸಿಬಿ) ಸಂಗ್ರಹಿಸಿರುವ ಅಂತಹ 106 ಜಾಲತಾಣಗಳ ಪಟ್ಟಿಯೊಂದನ್ನು ನೀಡಿದರು.
ಅಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂತಹ ಪೋರ್ಟಲ್‌ಗಳ ಬರಹಗಳು ಹಾಗೂ ಕೊಡುಗೆಗಳನ್ನು ಪತ್ತೆ ಹಚ್ಚುವುದಕ್ಕಾಗಿ ನಿಯತವಾಗಿ ಸೈಬರ್ ಗಸ್ತು ನಡೆಸಲು ಗುತ್ತಿಗೆ ಆಧಾರದಲ್ಲಿ ಸೈಬರ್ ಅಪರಾಧ ತಜ್ಞರ ಸೇವೆಯನ್ನು ಪಡೆಯಲಾಗುತ್ತಿದೆ. ಅಂತಹ ಕೊಡುಗೆಗಳು ಪತ್ತೆಯಾದಲ್ಲಿ ಶಂಕಿತರ ವಿವರ ಸಂಗ್ರಹಿಸಿ, ಕಾನೂನು ಕ್ರಮಕ್ಕಾಗಿ ಸಂಬಂಧಿತ ಜಾರಿ ಸಂಸ್ಥೆಗಳಿಗೆ ನೀಡಲಾಗುವುದೆಂದು ದವೆ ವಿವರಿಸಿದರು.





