ಯುಇಎಫ್‌ಎ ಶ್ರೇಷ್ಠ ಆಟಗಾರರ ಅಂತಿಮ ಪಟ್ಟಿಯಲ್ಲಿ ರೊನಾಲ್ಡೊ

ಮ್ಯಾಡ್ರಿಡ್, ಜು.18: ಯುಇಎಫ್‌ಎ ಶ್ರೇಷ್ಠ ಆಟಗಾರರ ಪ್ರಶಸ್ತಿ ಗಾಗಿ ಆಯ್ಕೆ ಮಾಡಲಾದ ಅಂತಿಮ 10ರ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ರಿಯಲ್ ಮ್ಯಾಡ್ರಿಡ್‌ನ ಗಾರೆತ್ ಬಾಲೆ ಸ್ಥಾನ ಪಡೆದಿದ್ದಾರೆ.
ಮೇನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಅಟ್ಲೆಟಿಕೊ ಮ್ಯಾಡ್ರಿಡ್ ವಿರುದ್ಧ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದ್ದ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ತಂಡ 11ನೆ ಬಾರಿ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಲು ಪ್ರಮುಖ ಕಾಣಿಕೆ ನೀಡಿದ್ದರು.
ಇತ್ತೀಚೆಗೆ ಕೊನೆಗೊಂಡ 2016ರ ಯುರೋ ಕಪ್‌ನಲ್ಲಿ ಪೋರ್ಚುಗಲ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಪ್ರಶಸ್ತಿ ಗೆಲ್ಲುವಲ್ಲೂ ನೆರವಾಗಿದ್ದರು.
ರೊನಾಲ್ಡೊರ ಸಹ ಆಟಗಾರ ಪೇಪೆ, ವೇಲ್ಸ್ ತಂಡದ ಸ್ಟಾರ್ ಆಟಗಾರ ಗಾರೆತ್ ಬಾಲೆ ಯುರೋಪ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿದ್ದಾರೆ. ಗಾರೆತ್ ಇತ್ತೀಚೆಗೆ ನಡೆದ ಯುರೋ ಕಪ್‌ನಲ್ಲಿ ವೇಲ್ಸ್ ತಂಡ 1958ರ ಬಳಿಕ ಆಡಿದ ತನ್ನ ಮೊದಲ ಪ್ರಮುಖ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಲು ದೊಡ್ಡ ಕಾಣಿಕೆ ನೀಡಿದ್ದರು.
ಯುರೋ ಕಪ್‌ನಲ್ಲಿ ಫ್ರಾನ್ಸ್‌ನ ಪರ ಆರು ಗೋಲುಗಳನ್ನು ಬಾರಿಸಿದ್ದ ಅಟ್ಲೆಟಿಕೊ ಕ್ಲಬ್‌ನ ಸ್ಟ್ರೈಕರ್ ಆ್ಯಂಟನಿ ಗ್ರೀಝ್ಮನ್ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಗೋಲ್ಡನ್ ಬೂಟ್‌ನ್ನು ತನ್ನದಾಗಿಸಿಕೊಂಡಿದ್ದರು. ಈ ಸಾಧನೆಯ ಹಿನ್ನೆಲೆಯಲ್ಲಿ ಅವರು ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಾರ್ಸಿಲೋನದ ಲಿಯೊನೆಲ್ ಮೆಸ್ಸಿ, ಲೂಯಿಸ್ ಸುಯರೆಝ್, ಮಾನುಯೆಲ್ ನೆಯೆರ್ ಹಾಗೂ ಥಾಮಸ್ ಮುಲ್ಲರ್ ಪ್ರಶಸ್ತಿ ಸ್ಪರ್ಧೆಯಲ್ಲಿದ್ದಾರೆ.







