ಕಾರಿನ ಮೇಲೆ ಗುಂಪುದಾಳಿ: ಪಿಡಿಪಿ ಶಾಸಕನಿಗೆ ಗಾಯ
ಕಾಶ್ಮೀರ
ಶ್ರೀನಗರ, ಜು.18: ಜಮ್ಮು-ಕಾಶ್ಮೀರದ ಆಳುವ ಪಿಡಿಪಿಯ ಶಾಸಕರೊಬ್ಬರ ಕಾರಿನ ಮೇಲೆ ರವಿವಾರ ರಾತ್ರಿ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ ಕಾರನ್ನು ಉರುಳಿಸಿ ಶಾಸಕರನ್ನು ಗಾಯಗೊಳಿಸಿದೆ.
ಪುಲ್ವಾಮದ ಶಾಸಕ ಮುಹಮ್ಮದ್ ಖಲೀಲ್ ಬಂಧ್ ರವಿವಾರ ರಾತ್ರಿ ಸುಮಾರು 1 ಗಂಟೆಯ ವೇಳೆ ಶ್ರೀನಗರಕ್ಕೆ ಹೋಗುತ್ತಿದ್ದ ವೇಳೆ ಗುಂಪೊಂದು ಅವರ ಕಾರಿನ ಮೇಲೆ ಕಲ್ಲುಗಳನ್ನೆಸೆಯತೊಡಗಿತು. ಚಾಲಕನು ವೇಗ ಹೆಚ್ಚಿಸಿ ಪಾರಾಗಲು ಯತ್ನಿಸಿದಾಗ ಕಾರು ಉರುಳಿ ಬಿದ್ದು ಶಾಸಕನಿಗೆ ಗಾಯಗಳಾಗಿವೆ. ಅವರನ್ನು ಸೇನಾ ಆಸ್ಪತ್ರೆಗೆ ಒಯ್ಯಲಾಗಿದೆ.
ಶಾಸಕ ಮುಹಮ್ಮದ್‌ರ ಸ್ಥಿತಿ ಸ್ಥಿರವಿದೆಯೆಂದು ಪುಲ್ವಾಮದ ಜಿಲ್ಲಾಧಿಕಾರಿ ಮುನಿರುಲ್ ಇಸ್ಲಾಂ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಾಶ್ಮೀರ ಕಣಿವೆಯಲ್ಲಿ ನಡೆಸ ಹಿಂಸಾಚಾರದ ವೇಳೆ ಪಿಡಿಪಿಯ ಹಲವು ರಾಜಕಾರಣಿಗಳ ಮೇಲೆ ದಾಳಿಗಳು ನಡೆದಿವೆ.
ಹಲವು ಶಾಸಕರ ವಿರುದ್ಧ, ಜನರ ಬಳಿಗೆ ಹೋಗುತ್ತಿಲ್ಲ ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿತ್ತು. ಆದರೆ, ಮುಹಮ್ಮದ್ ತನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀನಗರಕ್ಕೆ ಹಿಂದಿರುಗುತ್ತಿದ್ದ ವೇಳೆಯೇ ಅವರ ಮೇಲೆ ದಾಳಿ ನಡೆದಿದೆ.
ವಾನಿ ಹತ್ಯೆಯ ಬಳಿಕ ಪಿಡಿಪಿ ಕಾರ್ಯಕರ್ತನೊಬ್ಬನ ಮನೆಗೆ ಬೆಂಕಿ ಹಚ್ಚಲಾಗಿತ್ತು. ಅನೇಕ ಸರಕಾರಿ ಕಟ್ಟಡಗಳನ್ನು ಗುರಿಮಾಡಲಾಗಿತ್ತು. ಪಿಡಿಪಿಗೆ ನಿಕಟನೆನ್ನಲಾದ ವ್ಯಾಪಾರಿಯೊಬ್ಬನ 7 ಸಾವಿರ ಸೇಬು ಗಿಡಗಳಿದ್ದ ತೋಟವೊಂದನ್ನು ಧ್ವಂಸಗೊಳಿಸಲಾಗಿತ್ತು.





