ಕಾಶ್ಮೀರದ ಪರಿಸ್ಥಿತಿ ಫೆಲೆಸ್ತೀನ್ ನಂತಿದೆ : ನೋಮ್ ಚಾಮ್ಸ್ಕಿ

ಬೋಸ್ಟನ್ /ಶ್ರೀನಗರ, ಜು.19: ಕಾಶ್ಮೀರದ ಪ್ರಸಕ್ತ ಪರಿಸ್ಥಿತಿ ಫೆಲೆಸ್ತೀನ್‌ನಂತಿದೆ ಎಂದು ಅಮೆರಿಕದ ಖ್ಯಾತ ಭಾಷಾತಜ್ಞ ಹಾಗೂ ರಾಜಕೀಯ ಕಾರ್ಯಕರ್ತ ಪ್ರೊ. ನೋಮ್ ಚಾಮ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರ ಸಮಸ್ಯೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿರುವ ಹಾಗೂ ಸಾಮಾಜಿಕ-ರಾಜಕೀಯ ವಿಶ್ಲೇಷಕರಾಗಿರುವ ಮೆಹಬೂಬ್ ಮಖ್ ಧೂಮಿಯವರೊಂದಿಗಿನ ಇ-ಮೇಲ್ ಸಂಭಾಷಣೆಯೊಂದರಲ್ಲಿ ಅವರು ಮೇಲಿನಂತೆ ಹೇಳಿದ್ದಾರೆಂದು ಕ್ಯಾರವಾನ್ ಡೈಲಿ ವರದಿ ಮಾಡಿದೆ.
ಕಾಶ್ಮೀರದಲ್ಲಿನ ಪ್ರಸಕ್ತ ಬೆಳವಣಿಗೆಗಳು ‘ಆಘಾತಕಾರಿ’ ಎಂದು ಬಣ್ಣಿಸಿದ ಅವರು, ಕಾಶ್ಮೀರ ಹಾಗೂ ಭಾರತದ ಉಳಿದ ಭಾಗಗಳ ನಡುವಣ ಮಾತುಕತೆಗಳು ‘ಭಾವೋದ್ರೇಕ’ದಿಂದ ಕೂಡಿವೆ ಎಂದು ಅವರು ಹೇಳಿದ್ದಾರೆ.
ಹಿಂದೊಮ್ಮೆ ತಾನು ಭಾರತದಲ್ಲಿ ಕಾಶ್ಮೀರ ವಿಚಾರದ ಬಗ್ಗೆ ಚರ್ಚೆ ನಡೆಸಿದಾಗ ಅದು ಜನರನ್ನು ಅದೆಷ್ಟು ಭಾವೋದ್ರೇಕಗೊಳಿಸಿತ್ತೆಂದರೆ ನನ್ನ ಆತಿಥೇಯರು ನಾನು ಭಾರತದಲ್ಲಿ ಇರುವಷ್ಟು ಸಮಯ ಪೊಲೀಸ್ ರಕ್ಷಣೆ ಪಡೆಯುವಂತೆ ಒತ್ತಾಯಿಸಿದ್ದರು ಎಂದು ನೋಮ್ ಚಾಮ್ಸ್ಕಿ ನೆನಪಿಸಿಕೊಂಡಿದ್ದಾರೆ.
‘‘ಫೆಲೆಸ್ತೀನ್ ವಿಚಾರದಲ್ಲಿ ಅಮೆರಿಕ ಮುಖ್ಯ ಪಾತ್ರ ವಹಿಸಬಹುದಾಗಿರುವುದರಿಂದ ನಾನು ಆ ವಿಚಾರಕ್ಕೆ ಮಹತ್ವ ನೀಡುತ್ತೇನೆ. ಅಮೆರಿಕದಲ್ಲಿರುವ ಕಾರ್ಯಕರ್ತರು ಅಲ್ಲಿ ಏನನ್ನಾದರೂ ಮಾಡಬಹುದು. ಆದರೆ ಕಾಶ್ಮೀರದ ವಿಚಾರದಲ್ಲಿ ಹಾಗಾಗಲು ಸಾಧ್ಯವಿಲ್ಲ’’ ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಾರತ ಹಾಗೂ ಪಾಕಿಸ್ತಾನಗಳ ಸಮಾನ ಸಂಯುಕ್ತ ವ್ಯವಸ್ಥೆ ಹೊಂದಿರಬೇಕೆಂದು ಚಾಮ್ಸ್ಕಿ ಈ ಹಿಂದೆ ಸಲಹೆ ನೀಡಿದ್ದರಲ್ಲದೆ, ಕಾಶ್ಮೀರದಿಂದ ಸೇನೆಯನ್ನು ಹಿಂದಕ್ಕೆ ಪಡೆಯಬೇಕೆಂದೂ ಹೇಳಿದ್ದರು.







