ಎಬಿವಿಪಿ ನಾಯಕ ಸುಶೀಲ್ ಮೇಲೆ ಪ್ರಕರಣ ದಾಖಲು
ಹೈದರಾಬಾದ್ ವಿವಿಯಲ್ಲಿ ಸಿಖ್ ವಿದ್ಯಾರ್ಥಿಯ ಮೇಲೆ ಹಲ್ಲೆ
.jpg)
ಹೈದರಾಬಾದ್, ಜು.19: ಕಾಶ್ಮೀರ ಪರಿಸ್ಥಿತಿಯ ಚರ್ಚೆಗೆ ನಡೆಸಲಾದ ಸಭೆಯೊಂದರ ನಂತರ ಹೈದರಾಬಾದ್ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದು ಎರಡು ದಿನಗಳ ನಂತರ ಎಂ.ಫಿಲ್ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಎಬಿವಿಪಿ ನಾಯಕ ಎನ್. ಸುಶೀಲ್ ಕುಮಾರ್ ಹಾಗೂ 30 ಮಂದಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪವನ್ನೂ ಕುಮಾರ್ ಎದುರಿಸುತ್ತಿದ್ದಾನೆ.
ದಾಳಿಕೋರರು ತನ್ನನ್ನು ಕಾಶ್ಮೀರಿ ಯುವಕನೆಂದು ತಪ್ಪಾಗಿ ತಿಳಿದು ಹಲ್ಲೆ ನಡೆಸಿದ್ದಾರೆಂದು ಸಂತ್ರಸ್ತ ವಿದ್ಯಾರ್ಥಿ ಅನ್ಮೋಲ್ ಸಿಂಗ್ ಹೇಳಿದ್ದಾರೆ. ತರುವಾಯ ಸಿಂಗ್ ಕೂಡ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಕುಮಾರ್ ಪ್ರತಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಜುಲೈ 16ರಂದು ಸಂಜೆ ನಡೆದಿದೆಯೆನ್ನಲಾಗಿದ್ದು, ಪೊಲೀಸರು ಕುಮಾರ್ ಹಾಗೂ ಇತರ 30 ಮಂದಿಯ ವಿರುದ್ಧ ಸೆಕ್ಷನ್ 324, 31 ಅನ್ವಯ ಪ್ರಕರಣ ದಾಖಲಿಸಿದ್ದರೆ, ಸಿಂಗ್ ವಿರುದ್ಧ ಸೆಕ್ಷನ್ 323 ಅನ್ವಯ ಪ್ರಕರಣ ದಾಖಲಾಗಿದೆ.
ಶನಿವಾರ ವಿಶ್ವವಿದ್ಯಾನಿಲಯ ಆವರಣದಲ್ಲಿರುವ ವಾಣಿಜ್ಯ ಕಾಂಪ್ಲೆಕ್ಸ್‌ನಲ್ಲಿ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮವನ್ನು ಖಂಡಿಸಲು ನಡೆಸಲಾಗಿದ್ದ ಸಭೆಯೊಂದರಲ್ಲಿ ಭಾಗವಹಿಸಿ ಸಿಂಗ್ ಹಿಂದಿರುಗುತ್ತಿದ್ದಾಗ ಕುಮಾರ್ ಹಾಗೂ ಇತರರು ಆತನನ್ನು ಕಾಶ್ಮೀರಿ ವಿದ್ಯಾರ್ಥಿಯೆಂದು ತಪ್ಪಾಗಿ ತಿಳಿದು ಹಲ್ಲೆ ನಡೆಸಿದ್ದರು. ನಂತರ ಆಸ್ಪತ್ರೆಯೊಂದರ ಸಮೀಪವೂ ತನ್ನ ಮೇಲೆ ಹಲ್ಲೆ ನಡೆದಿತ್ತು ಎಂದು ಸಿಂಗ್ ಆರೋಪಿಸಿದ್ದಾರೆ. ಅತ್ತ ಸಿಂಗ್ ಹಾಗೂ ಆತನ ಗೆಳೆಯರು ತನ್ನ ಮೇಲೆ ಹಾಗೂ ತನ್ನ ಗೆಳೆಯರ ಮೇಲೆ ಹಲ್ಲೆ ನಡೆಸಿ ಪ್ರತ್ಯೇಕತಾವಾದಿ ಘೋಷಣೆಗಳನ್ನು ಕೂಗಿದರು ಎಂದು ತನ್ನ ಪ್ರತಿ ದೂರಿನಲ್ಲಿ ಕುಮಾರ್ ದೂರಿದ್ದಾನೆ.
ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಗುಂಪುಗಳಿಂದ ದೂರು ಸ್ವೀಕರಿಸಿದ್ದು ನಿಯಮಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಕುಲಪತಿಗಳ ವಕ್ತಾರ ಪ್ರೊ. ವಿಪಿನ್ ಶ್ರೀವಾಸ್ತವ ತಿಳಿಸಿದ್ದಾರೆ.
ತರುವಾಯ ಸಿಂಗ್ ಮೇಲಿನ ಹಲ್ಲೆಯನ್ನು ವೇಮುಲಾ ಆತ್ಮಹತ್ಯೆಯ ನಂತರದ ಪ್ರತಿಭಟನೆಗಳ ನೇತೃತ್ವ ವಹಿಸಿರುವ ಸಾಮಾಜಿಕ ನ್ಯಾಯಕ್ಕಾಗಿನ ಜಂಟಿ ಕ್ರಿಯಾ ಸಮಿತಿ ಖಂಡಿಸಿದೆ.







