ಮಂಗಳೂರು: ಹಜ್ ಯಾತ್ರಿಕರಿಗೆ ವ್ಯಾಕ್ಸಿನ್

ಮಂಗಳೂರು, ಜು. 19: ರಾಜ್ಯ ಹಜ್ ಸಮಿತಿಯಿಂದ ಮುಂದಿನ ತಿಂಗಳು ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಹಜ್ ಯಾತ್ರಿಕರಿಗೆ ಚುಚ್ಚುಮದ್ದು ಹಾಗೂ ಲಸಿಕೆ ಹಾಕುವ ಕಾರ್ಯಕ್ರಮ ಇಂದು ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ನಡೆಯಿತು. 428 ಮಂದಿ ವ್ಯಾಕ್ಸಿನ್ ಹಾಕಿಸುವ ಮೂಲಕ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ.ಮುಹಮ್ಮದ್ ಕುಂಞಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಶೀದ್ ಹಾಜಿ, ಯೆನೆಪೊಯ ಮೆಡಿಕಲ್ ವಿಭಾಗದ ನಿರ್ದೇಶಕ ಡಾ.ತಾಹಿರ್, ಸಿ.ಮಹ್ಮೂದ್, ಎಂ.ಮಹ್ಮೂದ್ ಹಾಜಿ, ಬಿ.ಎಸ್.ಬಶೀರ್, ಅಹ್ಮದ್ ಬಾವ, ಹಜ್ ಇಲಾಖೆಯ ಅಧಿಕಾರಿಗಳಾದ ಅಬೂಬಕರ್, ಫೈರೋಝ್ ಪಾಶ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ, ಹನೀಫ್ ಹಾಜಿ ಗೋಳ್ತಮಜಲು, ಮೊಯ್ದಿನಬ್ಬ, ರಿಯಾಝ್ ಬಂದರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಜ್ ಯಾತ್ರಿಕರಿಗೆ ಈ ಸಂದರ್ಭದಲ್ಲಿ ವ್ಯಾಕ್ಸಿನ್‌ಗಳನ್ನು ನೀಡಲಾಯಿತು. ಆಗಸ್ಟ್ 4ರಂದು ಹಜ್ ಯಾತ್ರಿಕರನ್ನು ಹೊತ್ತ ಮೊದಲ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಆಗಸ್ಟ್ 5, 6, 7, 8 ರಂದು ಒಟ್ಟು ಐದು ತಂಡಗಳಲ್ಲಿ 638 ಮಂದಿ ಹಜ್ ಯಾತ್ರಿಗಳು ಪವಿತ್ರ ಮಕ್ಕಾಗೆ ಪ್ರಯಾಣ ಬೆಳೆಸಲಿದ್ದಾರೆ. ದ.ಕ., ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಈ ಹಜ್ ಯಾತ್ರಿಕರಲ್ಲಿ ಮಂಗಳೂರಿನಿಂದ 406 ಮಂದಿ ಹಜ್ ಯಾತ್ರಿಕರಿದ್ದಾರೆ ಎಂದು ಎಸ್.ಎಂ.ರಶೀದ್ ಹಾಜಿ ಮಾಹಿತಿ ನೀಡಿದರು.
ಯೆನೆಪೊಯ ಆಸ್ಪತ್ರೆ ಮಸೀದಿಯ ಇಮಾಮ್ ಜಿ.ಎಂ.ಇಸ್ಮಾಯೀಲ್ ಮದನಿ ದುಆ ನೆರವೇರಿಸಿದರು. ಎಸ್.ಎಂ.ರಶೀದ್ ಹಾಜಿ ಅವರು ಅತಿಥಿಗಳನ್ನು ಸ್ವಾಗತಿಸಿದರು.







