ತಂದೆಯೊಂದಿಗೆ ಮೀನು ಹಿಡಿಯುತ್ತಿದ್ದಾಕೆ ಈಗ ರಾಷ್ಟ್ರಮಟ್ಟದ ಶೂಟರ್
ಇದು ಭೋಪಾಲ್‌ನ ಮನೀಶಾ ಕೀರ್ ಯಶೋಗಾಥೆ

ಭೋಪಾಲ್, ಜು.19: ಹದಿನೈದರ ಹರೆಯದ ಮನೀಶಾ ಕೀರ್ ಮೀನುಗಾರಿಕೆ ಹಾಗೂ ಕ್ರೀಡೆಯ ಅನುಭವದ ಬಗ್ಗೆ ಒಂದೇ ಉಸಿರಿನಲ್ಲಿ ಹೇಳಬಲ್ಲೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ. ಮೂರು ವರ್ಷಗಳ ಹಿಂದೆ ಮನೀಶಾ ಭೋಪಾಲ್‌ನ ಸರೋವರವೊಂದರಲ್ಲಿ ತಂದೆಯೊಂದಿಗೆ ಮೀನು ಹಿಡಿಯುವ ಕಾಯಕದೊಂದಿಗೆ ತನ್ನ ದಿನವನ್ನು ಆರಂಭಿಸುತ್ತಿದ್ದಳು. ಬದಲಾದ ಕಾಲದಲ್ಲಿ ಶೂಟರ್ ಆಗಿ ಪರಿವರ್ತಿತರಾಗಿರುವ ಮನೀಶಾ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಮನೀಶಾರ ತಂದೆ ಕೈಲಾಶ್ ಕೀರ್ ಸರೋವರದಲ್ಲಿ ಬಲೆಯ ಮೂಲಕ ಮೀನನ್ನು ಹಿಡಿದು ನಗರದ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇದರಿಂದ ಬರುವ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ತಂದೆಗೆ ನೆರವಾಗುತ್ತಿದ್ದ ಮನೀಶಾಗೆ ಅಕ್ಕ ಸೋನಿಯಾ ಹೊಸ ದಿಕ್ಕು ತೋರಿಸುತ್ತಾಳೆ.
ರೈಫಲ್ಸ್‌ಗಳ ಶೂಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಮನೀಶಾರನ್ನು ಒಂದು ದಿನ ಶಾಟ್‌ಗನ್ ಟ್ರಯಲ್ಸ್ ನಡೆಯುತ್ತಿದ್ದ ಮಧ್ಯಪ್ರದೇಶ ಶೂಟಿಂಗ್ ಅಕಾಡೆಮಿಗೆ ಸೋನಿಯಾ ಕರೆದೊಯ್ಯುತ್ತಾರೆ. ಟ್ರಯಲ್ಸ್‌ನಲ್ಲಿ ವೃತ್ತಿಪರ ಶೂಟರ್‌ರಂತೆಯೇ ರೈಫಲ್ ಹಿಡಿದ ಮನೀಶಾರ ಪ್ರತಿಭೆಯನ್ನು ಗುರುತಿಸಿದ ಅಕಾಡೆಮಿಯ ಮುಖ್ಯಸ್ಥ, ಮಾಜಿ ಒಲಿಂಪಿಯನ್ ಮನ್‌ಶೇರ್ ಸಿಂಗ್ ಅವರು ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮನೀಶಾಗೆ ಸಲಹೆ ನೀಡುತ್ತಾರೆ.
ಕುಟುಂಬದ ಜೀವನ ನಿರ್ವಹಣೆಗಾಗಿ ತಂದೆಯೊಂದಿಗೆ ಮೀನುಗಾರಿಕೆ ನಡೆಸುತ್ತಿದ್ದ ಮನೀಶಾ ಇವತ್ತು ಅತ್ಯುತ್ತಮ ಶೂಟರ್ ಆಗಿ ರೂಪುಗೊಂಡಿದ್ದು 2020ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಮೂರು ನ್ಯಾಶನಲ್ ಹಾಗೂ ಎರಡು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿರುವ ಮನೀಶಾ ಈಗಾಗಲೇ 10 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
2016ರ ಮೇನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಜೂನಿಯರ್ ಶಾಟ್‌ಗನ್ ಕಪ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದರು. ಇದು ಆಕೆ ವಿದೇಶದಲ್ಲಿ ಆಡಿರುವ ಎರಡನೆ ಟೂರ್ನಿಯಾಗಿತ್ತು.
‘‘2013ರಲ್ಲಿ ಹೊಸತಾಗಿ ಉದ್ಘಾಟನೆಯಾಗಿದ್ದ ಸ್ಟೇಡಿಯಂನಲ್ಲಿ ಟ್ರಯಲ್ಸ್‌ಗಾಗಿ ಹೋಗಿದ್ದೆ. ಆಯ್ಕೆಯೂ ಆದೆ. ಕೆಲವು ಶೂಟರ್‌ಗಳೊಂದಿಗೆ ತರಬೇತಿ ನಡೆಸಿದೆ. ನ್ಯಾಶನಲ್ ಇವೆಂಟ್‌ಗೆ ಆಯ್ಕೆಯಾದೆ. ನಾನು ಮೊದಲ ಯತ್ನದಲ್ಲಿ 5ನೆ ಸ್ಥಾನ ಪಡೆದಿದ್ದೆ. ಹಾಗಾಗಿ ಭಾರತೀಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಎರಡನೆ ಸ್ಪರ್ಧೆಗೆ ಮೊದಲು ಕಠಿಣ ತರಬೇತಿ ನಡೆಸಿದೆ. ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲೇಬೇಕೆಂಬ ಗುರಿಯೊಂದಿಗೆ ಅಕಾಡೆಮಿಯಲ್ಲಿ ಇಡೀ ದಿನ ಪ್ರಾಕ್ಟೀಸ್ ನಡೆಸಿದೆ. ಅಂತಿಮವಾಗಿ ನಾನು ಭಾರತ ತಂಡ ಸೇರಿದೆ. 2ನೆ ಟೂರ್ನಿಯಲ್ಲೇ ನಾವು ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದೆವು’’ ಎಂದು ಮನೀಶಾ ನಡೆದುಬಂದ ಹಾದಿಯನ್ನು ವಿವರಿಸಿದರು.
ಮನೀಶಾಗೆ ಒಟ್ಟು 8 ಮಂದಿ ಒಡಹುಟ್ಟಿದವರಿದ್ದಾರೆ. 8 ಮಂದಿ ಮಕ್ಕಳಲ್ಲಿ ಈಕೆ ನಾಲ್ಕನೆಯವಳು. ಮನೀಶಾರದ್ದು ಮೀನುಗಾರರ ಕುಟುಂಬ. ಹೀಗಾಗಿ ಶೂಟಿಂಗ್‌ನ್ನು ವೃತ್ತಿಯಾಗಿ ಆಯ್ಕೆ ಮಾಡುವ ಬಗ್ಗೆ ಆಕೆ ಯೋಚಿಸಿಯೇ ಇರಲಿಲ್ಲ. ಮನೀಶಾರ 8 ಒಡಹುಟ್ಟಿದವರಲ್ಲಿ ಏಳು ಮಂದಿ 8ನೆ ತರಗತಿ ದಾಟಿಲ್ಲ. ಅವರೆಲ್ಲರೂ ಸಂಪ್ರದಾಯದಂತೆ ಮೀನುಗಾರಿಕೆಯನ್ನೇ ಉದ್ಯೋಗವಾಗಿ ಆಯ್ದುಕೊಂಡರು.
ಮನೀಶಾರ ಸಹೋದರಿ ಸೋನಿಯಾ ರಾಷ್ಟ್ರಮಟ್ಟದ ರೋವರ್, ಹಿರಿಯ ಸಹೋದರ ಗೌತಮ್ ಹವ್ಯಾಸಿ ವಾಲಿಬಾಲ್ ಆಟಗಾರ. ಕೈಲಾಶ್‌ರ ಎರಡನೆ ಮಗಳು ಸೋನಿಯಾ, ಮನೀಶಾ ಶೂಟಿಂಗ್‌ನಲ್ಲಿ ಆಸಕ್ತಿ ಮೂಡಿಸಲು ಕಾರಣರಾಗಿದ್ದರು.








