ಟೆಂಡರ್ ಪ್ರಕ್ರಿಯೆ ಪಾಲಿಸಲಾಗುತ್ತಿಲ್ಲ: ಎಡಿಸಿ ಕುಮಾರ್ ಆಕ್ಷೇಪ
ದೇವಸ್ಥಾನಗಳ ಆವರಣದ ಅಂಗಡಿಗಳ ಬಾಡಿಗೆ

ಮಂಗಳೂರು,ಜು.19: ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳ ಆವರಣದಲ್ಲಿರುವ ಅಂಗಡಿಗಳನ್ನು ಸಮರ್ಪಕವಾದ ಬಾಡಿಗೆ ದರ ಗೊತ್ತು ಪಡಿಸಿ ಟೆಂಡರ್ ಮೂಲಕ ಪ್ರಕ್ರಿಯೆಯನ್ನು ನಿರ್ವಹಿಸಬೇಕಾಗಿದ್ದರೂ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿಯೇ ಈ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರೂ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎ ಮತ್ತು ಬಿ ವರ್ಗದ ದೇವಸ್ಥಾನಗಳ ಆಡಳಿತದಾರರ ಸಭೆಯಲ್ಲಿ ಅವರು ಈ ಆಕ್ಷೇಪ ವ್ಯಕ್ತಪಡಿಸಿದರು.
ಕೋಟ್ಯಾಂತರ ರೂ. ಆದಾಯ ಹೊಂದಿರುವ, ಮುಜರಾಯಿ ಇಲಾಖೆಗೆ ಒಳಪಡುವ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯೇ ದೇವಸ್ಥಾನದ ಆವರಣದಲ್ಲಿರುವ 60ರಿಂದ 70 ಲಕ್ಷ ರೂ. ಬಾಡಿಗೆ ಬರುವ ಅಂಗಡಿಗಳನ್ನು ಟೆಂಡರ್ ಪ್ರಕ್ರಿಯೆ ನಿರ್ವಹಿಸದೆ, ಸರಕಾರದ ಮಟ್ಟದಿಂದಲೇ ಶೇ. 10ರಷ್ಟು ಬಾಡಿಗೆಯನ್ನು ಹೆಚ್ಚಿಸಿ ಹಿಂದಿನವರಿಗೇ ಬಾಡಿಗೆ ಮುಂದುವರಿಸಿತ್ತು. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಜಿಲ್ಲಾ ಧಾರ್ಮಿಕ ಪರಿಷತ್‌ನ ವರದಿ ಪಡೆಯದೇ, ಕಾನೂನು ಬಾಹಿರವಾಗಿ ಬಾಡಿಗೆ ನೀಡುವ ಪ್ರಕ್ರಿಯೆ ನಡೆಸದೆ ಸರಕಾರಕ್ಕೆ ಸಂದಾಯವಾಗಬೇಕಾದ ಆದಾಯಕ್ಕೆ ಕುತ್ತು ತರಲಾಗಿದೆ ಎಂದು ಪತ್ರದಲ್ಲಿ ಸರಕಾರಕ್ಕೆ ಮನವರಿಕೆ ಮಾಡಲಾಗಿದೆ. ಈ ರೀತಿ ಹಲವಾರು ಎ ಮತ್ತು ಬಿ ವರ್ಗಕ್ಕೆ ಸೇರುವ ದೇವಸ್ಥಾನಗಳವರು ಜುಜುಬಿ ಬಾಡಿಗೆಯನ್ನು ನಿಗದಿಪಡಿಸಿ ಟೆಂಡರ್ ಪ್ರಕ್ರಿಯೆ ನಡೆಸದೆ ಅಂಗಡಿಗಳನ್ನು ಬಾಡಿಗೆಗೆ ನೀಡಿ ಅದರ ಒಪ್ಪಿಗೆಗಾಗಿ ಜಿಲ್ಲಾ ಧಾರ್ಮಿಕ ಪರಿಷತ್‌ಗೆ ಕಳುಹಿಸಿರುವ ಪ್ರಸ್ತಾವನೆಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ಎಡಿಸಿ ಕುಮಾರ್ ತಿಳಿಸಿದರು.
ವಿವಾಹ ಕಾರ್ಯದಲ್ಲೂ ಆಗುತ್ತಿಲ್ಲ ನಿಯಮ ಪಾಲನೆ
ಮುಜರಾಯಿ ಇಲಾಖೆಗೆ ಒಳಪಡುವ ಕೆಲವೊಂದು ದೇವಸ್ಥಾನಗಳಲ್ಲಿ ವಿವಾಹ ಕಾರ್ಯದ ಸಂದರ್ಭದಲ್ಲೂ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. 1,000 ರೂ. ಶುಲ್ಕ ನೀಡಿದರೆ, ವಿವಾಹ ಆಗುವ ವಧು- ವರರ ವಯಸ್ಸಿನ ದೃಢೀಕರಣ, ವಿಳಾಸದ ಸೂಕ್ತ ಮಾಹಿತಿ ಇಲ್ಲದೆಯೂ ವಿವಾಹವನ್ನು ನಡೆಸಿರುವಂತಹ ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆಯೂ ದೇವಸ್ಥಾನಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಸಭೆಯಲ್ಲಿ ತಿಳಿಸಿದರು.
ಮೂಲಭೂತ ಸೌಕರ್ಯಕ್ಕೆ ಕ್ರಿಯಾ ಯೋಜನೆಗೆ ಸೂಚನೆ
ಒಂದು ಕೋಟಿ ರೂ.ಗಳಿಗಿಂತ ಅಧಿಕ ಆದಾಯ ಹೊಂದಿರುವ ದೇವಾಲಯಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸಕಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಿಯಾ ಯೋಜನೆಯನ್ನು ತಯಾರಿಸಿ ನೀಡುವಂತೆ ಸರಕಾರ ಸೂಚನೆ ನೀಡಿದ್ದು, ದೇವಾಲಯಗಳಿಂದ ಇನ್ನಷ್ಟೆ ಕ್ರಿಯಾ ಯೋಜನೆ ಸಲ್ಲಿಕೆಯಾಗಬೇಕಿದೆ ಎಂದು ಕುಮಾರ್ ಹೇಳಿದರು.
ಬಜೆಟ್‌ನಲ್ಲಿ ಅವಕಾಶವಿಲ್ಲದೆ ವೆಚ್ಚ ಮಾಡುವಂತಿಲ್ಲ
ಜಿಲ್ಲೆಯ ಎ ವಿಭಾಗಕ್ಕೆ ಸೇರಿದ 40 ದೇವಸ್ಥಾನಗಳಲ್ಲಿ 17 ದೇವಾಲಯಗಳಿಂದ ಮಾತ್ರವೇ ಪ್ರಸಕ್ತ ಸಾಲಿನ ಬಜೆಟ್ ಸಲ್ಲಿಕೆಯಾಗಿದೆ. ಬಿ ವಿಭಾಗದ 25 ದೇವಾಲಯಗಳಲ್ಲಿ 5 ದೇವಾಲಯಗಳಿಗೆ ಮಾತ್ರವೇ ಬಜೆಟ್ ಅನುಮೋದನೆ ದೊರಕಿದೆ. ಬಚೆಟ್‌ನಲ್ಲಿ ಅವಕಾಶವಿಲ್ಲದೆ ಯಾವುದೇ ಇತರ ಕಾರ್ಯಗಳಿಗೆ ದೇವಸ್ಥಾನ ಖರ್ಚು ವೆಚ್ಚ ಮಾಡುವಂತಿಲ್ಲ. ಈಗಾಗಲೇ ಜುಲೈ ತಿಂಗಳು ಕಳೆದಿರುವುದರಿಂದ ಬಜೆಟ್ ಸಲ್ಲಿಕೆಗೆ ಬಾಕಿ ಇರುವ ದೇವಾಲಯಗಳು ಶೀಘ್ರ ಸಲ್ಲಿಸಿ ಅನುಮೋದನೆ ಪಡೆಯಬೇಕೆಂದು ನಿರ್ದೇಶನ ನೀಡಿದ ಎಡಿಸಿ ಕುಮಾರ್, ದೇವಸ್ಥಾನಗಳ ಖರ್ಚು ವೆಚ್ಚಗಳ ಲೆಕ್ಕ ಪರಿಶೋಧನೆಗೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ದೇವಾಲಯದ ಹಳೆಯ ಚಿನ್ನವನ್ನು ಕರಗಿಸಿ ಹೊಸ ಚಿನ್ನ ಮಾಡಿಸಲು ಅವಕಾಶವಿದೆಯೇ ಎಂದು ದೇವಸ್ಥಾನ ಆಡಳಿತ ಮಂಡಳಿಯವರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಡಿಸಿ ಕುಮಾರ್, ಈಗಾಗಲೇ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ ದೇವಾಲಯಗಳಿಗೆ ಅನುಮತಿ ನೀಡಲಾಗಿದೆ ಎಂದರು.
ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಾಗ ಕ್ಯಾಮರಾವು ವಿದ್ಯುತ್ ದೀಪಗಳಿಗೆ ಎದುರು ಬದುರಾಗಿ ಇರದಂತೆ ಗಮನ ಹರಿಸಬೇಕು. ಬೆಳಕಿನ ವಿರುದ್ಧ ದಿಕ್ಕಿನಲ್ಲಿ ಕ್ಯಾಮರಾ ಅಳವಡಿಸಿದಾಗ ಮಾತ್ರವೇ ಗುಣಮಟ್ಟ ಉತ್ತಮವಾಗಿರುತ್ತದೆ. ದೇವಸ್ಥಾನಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡುವ ಸಂದರ್ಭ ಸ್ಥಳೀಯ ಪೊಲೀಸ್ ಠಾಣೆಗಳಿಂದ ವ್ಯಕ್ತಿಯ ಅಪರಾಧ ಹಿನ್ನೆಲೆಯಲ್ಲಿ ಪರಿಶೀಲಿಸಿಕೊಳ್ಳತಕ್ಕದ್ದು. ದೇವಸ್ಥಾನಗಳ ಹುಂಡಿಯನ್ನು ಪ್ರತಿ 15 ದಿನಗಳಿಗೊಮ್ಮೆ ಖಾಲಿ ಮಾಡಬೇಕು. ಬರ್ಗಲರ್ ಅಲರಾಂಗಳನ್ನು ಅಳವಡಿಸುವ ಸಂದರ್ಭ ಅದಕ್ಕೆ ಪ್ರತ್ಯೇಕ ಬ್ಯಾಟರಿ ಬ್ಯಾಕ್‌ಅಪ್ ಅಳವಡಿಸುವ ಜತೆಗೆ ಅಲರಾಂಗಳ ವಯರಿಂಗ್ ಗೋಚರಿಸುವಂತಿರಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ದೇವಸ್ಥಾನ ಆಡಳಿತ ಮಂಡಳಿ ಪ್ರತಿನಿಧಿಗಳಿಗೆ ಸಲಹೆ ನೀಡಿದರು.
ಕಟೀಲು ದೇವಾಲಯದಲ್ಲಿ ಪೊಲೀಸ್ ಹೊರಠಾಣೆ ರಚಿಸಬೇಕೆಂಬ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್‌ರಾವ್ ಬೊರಸೆ, ಹೊರಠಾಣೆ ರಚಿಸುವ ಪ್ರಕ್ರಿಯೆ ಸರಕಾರಿ ಮಟ್ಟದಲ್ಲಿ ನಡೆಯಬೇಕಾಗಿದೆ. ದೇವಸ್ಥಾನಗಳಿಗೆ ಭದ್ರತೆಯ ದೃಷ್ಟಿಯಿಂದ ಅಗತ್ಯವಿದ್ದಲ್ಲಿ ಹೋಮ್‌ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ ಎಂದರು.
ಸಭೆಯಲ್ಲಿ ಮಂಗಳೂರು ನಗರ ಪೊಲೀಸ್ ಡಿಸಿಪಿ ಶಾಂತರಾಜು, ಸಹಾಯಕ ಆಯುಕ್ತ ನಿಂಗಯ್ಯ ಉಪಸ್ಥಿತರಿದ್ದರು.
ಕುಕ್ಕೆಯ ಪ್ರಮುಖ ದೇವಸ್ಥಾನದ ಬಳಿಯ ಎರಡು ಅಂಗಡಿಗಳಲ್ಲಿ ಒಂದು ಅಂಗಡಿಗೆ 72 ಲಕ್ಷ ರೂ. ಹಾಗೂ ಮತ್ತೊಂದು ಅಂಗಡಿಗೆ 77 ಲಕ್ಷ ರೂ. ವಾರ್ಷಿಕ ಬಾಡಿಗೆ ನಿಗದಿ ಪಡಿಸಲಾಗಿದೆ. ಮತ್ತೆರಡು ಅಂಗಡಿಗಳಿಗೆ ತಲಾ 65 ಲಕ್ಷ ಹಾಗೂ 67 ಲಕ್ಷ ರೂ. ಬಾಡಿಗೆ ನಿಗಪಡಿಸಲಾಗಿದೆ. ಆದಿ ಸುಬ್ರಹ್ಮಣ್ಯ ಕ್ಷೇತ್ರದ ಆವರಣದಲ್ಲಿರುವ ಎರಡು ಅಂಗಡಿಗಳಿಗೆ ತಲಾ 54 ಲಕ್ಷ ರೂ. ಹಾಗೂ 56 ಲಕ್ಷ ರೂ. ವಾರ್ಷಿಕ ಬಾಡಿಗೆ ನಿಗದಿಪಡಿಸಲಾಗಿದೆ. ಕಾನೂನು ಪ್ರಕಾರ ಬಾಡಿಗೆ ನಿಗದಿಪಡಿಸಿದರೆ ಈ ಎಲ್ಲಾ ಅಂಗಡಿಗಳಿಂದ ತಲಾ 1 ಕೋಟಿ ರೂ.ಗಳಷ್ಟು ಬಾಡಿಗೆ ನಿಗದಿಯಾಗಲಿದೆ. ಇದೀಗ ಸರಕಾರಿ ಆದೇಶ ಉಲ್ಲಂಘನೆಯಾಗಿರುವುದರಿಂದ ಕೋಟ್ಯಂತರ ರೂ. ಸರಕಾರದ ಬೊಕ್ಕಸಕ್ಕೆ ನಷ್ಟವಾಗಲಿದೆ. ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಲಾಗಿದ್ದು, ಸೂಕ್ತ ಕ್ರಮಗೊಳ್ಳುವ ನಿರೀಕ್ಷೆ ಇದೆ. ದೇವಸ್ಥಾನಕ್ಕೆ ಸೇರಿದ ಅಂಗಡಿಗಳನ್ನು ಬಾಡಿಗೆಗೆ ನೀಡುವಾಗ ರೋಸ್ಟರ್ ಪದ್ಧತಿಯಡಿ ಸಾರ್ವಜನಿಕ ಪ್ರಕಟನೆ ನೀಡಿ ಬಹಿರಂಗ ಹರಾಜು ಹಾಕಬೇಕು
- ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ, ದ.ಕ.
ಸಿಡಿಮದ್ದು ಸಿಡಿಸುವ ಮೊದಲು ಇಲಾಖೆ ಅನುಮತಿ ಅತ್ಯಗತ್ಯ
ದೇವಸ್ಥಾನದಲ್ಲಿ ಹಬ್ಬ ಹರಿದಿನ, ವಿಶೇಷ ಪೂಜೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಸಿಡಿಮದ್ದು ಸಿಡಿಸಲು ಪೂರ್ವಭಾವಿಯಾಗಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಸಿಡಿಮದ್ದುಗಳ ಸಂಗ್ರಹದ ಬಗ್ಗೆಯೂ ಮಾಹಿತಿಯನ್ನು ಒದಗಿಸತಕ್ಕದು. ಸಿಡಿಮದ್ದಿನಿಂದ ಮನುಷ್ಯರಿಗೆ ಮಾತ್ರವಲ್ಲದೆ, ಯಾವುದೇ ಪ್ರಾಣಿ, ಪಕ್ಷಿಗೂ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಕೂಡಾ ದೇವಸ್ಥಾನಗಳವರ ಜವಾಬ್ದಾರಿಯಾಗಿರುತ್ತದೆ.
- ಭೂಷಣ್ ಜಿ.ಬೊರಸೆ, ಪೊಲೀಸ್ ವರಿಷ್ಠಾಧಿಕಾರಿ, ದ.ಕ.







