ಭಯೋತ್ಪಾದನೆಯ ನಿರ್ಮೂಲನೆಗೆ ಪ್ರಾರ್ಥಿಸಿ: ಎಸ್.ಬಿ. ದಾರಿಮಿ
ಜಮೀಯ್ಯತುಲ್ ಫಲಾಹ್‌ನಿಂದ ಹಜ್ ತರಬೇತಿ ಶಿಬಿರ

ಪುತ್ತೂರು, ಜು.19: ಭಯೋತ್ಪಾದನೆಯ ನಿರ್ಮೂಲನೆ ಮತ್ತು ಭಯೋತ್ಪಾದಕರ ಹಿಂದಿರುವ ರೂವಾರಿಗಳು ಬೆಳಕಿಗೆ ಬರುವಂತೆ ಹಜ್ ಯಾತ್ರಾರ್ಥಿಗಳು ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಯಾತ್ರಾರ್ಥಿಗಳಲ್ಲಿ ವಿನಂತಿಸಿದರು.
ಜಮೀಯತುಲ್ ಫಲಾಹ್ ಪುತ್ತೂರು ಘಟಕದ ಆಶ್ರಯದಲ್ಲಿ ಕಲ್ಲೇಗ ಮಸೀದಿ ವಠಾರದಲ್ಲಿ ನಡೆದ ಒಂದು ದಿನದ ಹಜ್ ತರಬೇತಿ ಶಿಬಿರದಲ್ಲಿ ದುಆಶೀರ್ವಚನ ನೀಡಿ ಮಾತನಾಡಿದರು.
ಹಜ್ ಕರ್ಮವು ಮನಸ್ಸಿನೊಳಗಿರುವ ಕಲ್ಮಶಗಳನ್ನು ತೊಡೆದು ಹಾಕಿ ಮುನ್ನಡೆಸಲು ಪ್ರೇರಣೆಯಾಗಿದ್ದು, ನಮ್ಮ ಒಗ್ಗಟ್ಟಿನ ಸಂದೇಶವಾಗಿದೆ ಎಂದರು. ಹಜ್ ತರಬೇತುದಾರ ಸಲೀಂ ಇರ್ಫಾನಿ ಪೈಝಿ ಚಪ್ಪಾರಪಡವು, ಹಜ್ ಯಾತ್ರಾರ್ಥಿಗಳು ಅನುಸರಿಸಬೇಕಾದ ನೀತಿ, ನಿಯಮಗಳು ಹಾಗೂ ಹಜ್ ಕರ್ಮಗಳ ಬಗ್ಗೆ ತಿಳಿಸಿದರು.
ಪುತ್ತೂರು ಜಮೀಯತುಲ್ ಫಲಾಹ್ ಘಟಕದ ಅಧ್ಯಕ್ಷ ಬಿ.ಎ.ಶುಕೂರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ, ಪುತ್ತೂರು ತಾಲೂಕು ಮುಸ್ಲಿಮ್ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್. ಇಬ್ರಾಹೀಂ ಕಮ್ಮಾಡಿ, ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಪಿ.ಬಿ. ಹಸನ್ ಹಾಜಿ, ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಮೊಯ್ದಿನಬ್ಬ ಹಾಜಿ, ಕಲ್ಲೇಗ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಪಿ. ಮುಹಮ್ಮದ್ ಹಾಜಿ, ಅಹ್ಮದ್ ಹಾಜಿ ತೀರ್ಥಹಳ್ಳಿ, ಪುತ್ತೂರು ಜಮೀಯ್ಯತುಲ್ ಫಲಾಹ್ ಘಟಕದ ಪ್ರಧಾನ ಕಾರ್ಯದರ್ಶಿ ಹಾಜಿ ಇಬ್ರಾಹೀಂ ಸಾಗರ್, ಇಸ್ಮಾಯೀಲ್ ಹಾಜಿ ಕೂರ್ನಡ್ಕ ಉಪಸ್ಥಿತರಿದ್ದರು. ಪುತ್ತೂರು ಜಮೀಯತುಲ್ ಫಲಾಹ್ ಘಟಕದ ಕೋಶಾಧಿಕಾರಿ ಶೇಖ್ ಝೈನುದ್ದೀನ್ ಸ್ವಾಗತಿಸಿ ವಂದಿಸಿದರು. ವಕೀಲ ಕೆ.ಎಂ. ಸಿದ್ದೀಕ್ ನಿರೂಪಿಸಿದರು.







