ಸಂಸದ ಕೀರ್ತಿ ಆಝಾದ್ರ ಪತ್ನಿ ಆಪ್ಗೆ ಸೇರ್ಪಡೆ?
ಹೊಸದಿಲ್ಲಿ, ಜು.19: ಅಮಾನತುಗೊಂಡಿರುವ ಬಿಜೆಪಿ ಸಂಸದ ಕೀರ್ತಿ ಆಝಾದ್ರ ಪತ್ನಿ ಹಾಗೂ ಮೂರು ಅವಧಿಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯಾಗಿರುವ ಪೂನಂ ಆಝಾದ್ ಬಿಜೆಪಿಗೆ ರಾಜೀನಾಮೆ ನೀಡಿ ಎಎಪಿ ಸೇರುವ ಸಿದ್ಧತೆಯಲ್ಲಿದ್ದಾರೆನ್ನಲಾಗಿದೆ. ಅವರು ಶೀಘ್ರವೇ ರಾಜೀನಾಮೆ ನೀಡಿ ಎಎಪಿ ಸೇರಲಿದ್ದಾರೆಂದು ಅವರ ನಿಕಟವರ್ತಿ ಮೂಲಗಳು ತಿಳಿಸಿವೆ.
ಅವರು ಸದ್ಯ ದಿಲ್ಲಿ ಬಿಜೆಪಿಯ ವಕ್ತಾರೆಯಾಗಿದ್ದು, ಈ ಹಿಂದೆ ಪಕ್ಷದ ಉಪಾಧ್ಯಕ್ಷೆಯಾಗಿದ್ದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಮೂರು ಬಾರಿ ಸದಸ್ಯೆಯಾಗಿದ್ದ ಪೂನಂ ಕೆಲವು ವರ್ಷಗಳಿಂದ ಪಕ್ಷದಲ್ಲಿ ನಿರ್ಲಕ್ಷಕ್ಕೊಳಗಾಗಿದ್ದಾರೆ.
ಡಿಡಿಸಿಎ ಅವ್ಯವಹಾರ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅರುಣ್ ಜೇಟ್ಲಿಯವರ ವಿರುದ್ಧ ತೀಕ್ಷ್ಣ ದಾಳಿ ನಡೆಸಿದ ಕಾರಣಕ್ಕಾಗಿ ಪತಿ ಕೀರ್ತಿ ಆಝಾದ್ ಬಿಜೆಪಿಯಿಂದ ಅಮಾನತಾಗಿರುವುದೂ ಅವರ ನಿರ್ಧಾರಕ್ಕೆ ಪ್ರಚೋದನೆ ನೀಡಿದೆಯೆನ್ನಲಾಗಿದೆ.
ಗಂಡ-ಹೆಂಡತಿ ಇಬ್ಬರಿಗೂ ಬಿಜೆಪಿಯಲ್ಲಿ ತಮ್ಮ ಭವಿಷ್ಯದ ಬಗ್ಗೆ ಖಚಿತತೆಯಿಲ್ಲ ಎಂದಿರುವ ಮೂಲಗಳು, ಆದಾಗ್ಯೂ ಕೀರ್ತಿ ಆಝಾದ್ ಪಕ್ಷಕ್ಕೆ ರಾಜೀನಾಮೆ ನೀಡಿದಲ್ಲಿ ಲೋಕಸಭಾ ಸದಸ್ಯತ್ವ ನಷ್ಟವಾಗುವುದರಿಂದ ಅವರು ಪತ್ನಿಯ ಹಾದಿ ತುಳಿಯುವ ಸಾಧ್ಯತೆಯಿಲ್ಲವೆಂದಿವೆ.
ನಿನ್ನೆಯಷ್ಟೇ ಬಿಜೆಪಿ ರಾಜ್ಯಸಭಾ ಸದಸ್ಯ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಎಎಪಿ ಸೇರುವ ನಿರೀಕ್ಷೆಯಿದೆ.