ಗುಜರಾತ್: ದಲಿತರಿಗೆ ಥಳಿತ ಜಿಲ್ಲಾ ಕಚೇರಿಯ ಮುಂದೆ ದನಗಳ ಅಸ್ಥಿಪಂಜರ ಸುರಿದು ಪ್ರತಿಭಟನೆ
ಹಿಂಸಾಚಾರಕ್ಕೆ ಹೆಡ್‌ಕಾನ್ಸ್‌ಸ್ಟೆಬಲ್ ಬಲಿ; 10 ಮಂದಿಗೆ ಗಾಯ

ಗಾಂಧಿನಗರ, ಜು19: ಗುಜರಾತ್‌ನ ಸೋಮನಾಥ್ ಜಿಲ್ಲೆಯ ಮೋಠಾ ಸಮಾಧಿಯಾಲ ಗ್ರಾಮದಲ್ಲಿ ಜು.11ರಂದು ದಲಿತರನ್ನು ಥಳಿಸಿರುವುದನ್ನು ಪ್ರತಿಭಟಿಸುವುದಕ್ಕಾಗಿ ದಲಿತರು ಸೋಮವಾರ ಸುರೇಂದ್ರನಗರ ಜಿಲ್ಲಾಧಿಕಾರಿ ಕಚೇರಿಯೆದುರು ಒಂದು ಟ್ರಕ್ ತುಂಬ ದನಗಳ ಅಸ್ಥಿಪಂಜರಗಳನ್ನು ತಂದಿಳಿಸಿದ್ದಾರೆ.
ಪ್ರತಿಭಟನೆಯು ಮಂಗಳವಾರವೂ ಮುಂದುವರಿದಿದ್ದು, ಕಲ್ಲು ತೂರಾಟದಲ್ಲಿ ಒಬ್ಬ ಹೆಡ್‌ಕಾನ್ಸ್‌ಸ್ಟೆಬಲ್ ಸಾವಿಗೀಡಾಗಿದ್ದಾರೆ. ಮೃತ ಹೆಡ್‌ಕಾನ್ಸ್‌ಸ್ಟೆಬಲ್‌ರನ್ನು ಸ್ಥಳೀಯ ಕ್ರೈಂ ಬ್ರಾಂಚ್‌ನ ಪಂಕಜ್ ಅಂಮ್ರೇಲಿ ಎಂದು ಗುರುತಿಸಲಾಗಿದ್ದು, ಗಾಯಗೊಂಡಿದ್ದ ಅವರು ರಾಜ್‌ಕೋಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಪ್ರತಿಭಟನಕಾರರು ಹಾಗೂ ಪೊಲೀಸರು ಸೇರಿದಂತೆ ಇತರ 10 ಮಂದಿ ಗಾಯಗೊಂಡಿದ್ದಾರೆ.
ಇತರ 7 ಪ್ರತ್ಯೇಕ ಪ್ರಕರಣಗಳಲ್ಲಿ ದಲಿತ ಯುವಕರಾದ ರಾಜೇಶ್‌ಪರ್ಮಾರ್, ರಮೇಶ್ ಪರ್ಧಿ, ಜಗದೀಶ್ ರಾಥೋಡ್, ಭರತ್ ಸೋಳಂಕಿ ಹಾಗೂ ಅನಿಲ್ ಮಗಧ್ ಎಂಬವರು ಗೊಂಡಾಲ್ ಪಟ್ಟಣದಲ್ಲಿ ಕಿಶೋರ್ ಸೋಳಂಕಿ ಹಾಗೂ ಅಮೃತ್ ಪರ್ಮಾರ್ ಎಂಬವರು ಜಮ್ಕಂಡೋರ್ನಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ 7 ಮಂದಿಯನ್ನು ಗೊಂಡಾಲ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ತಾವು ಜಿಲ್ಲಾಧಿಕಾರಿಗೆ ಮನವಿಯೊಂದನ್ನು ನೀಡಿದ್ದೇವೆ. ತಮ್ಮ ಕಳವಳವನ್ನು ಗಮನದಲ್ಲಿರಿಸುವ ಲಿಖಿತ ಭರವಸೆಯನ್ನು ಅವರು ನೀಡಿದ್ದಾರೆಂದು ಸತ್ತ ದನಗಳ ಪ್ರತಿಭಟನಕಾರಲ್ಲೊಬ್ಬನಾದ ನಾತುಭಾಯಿ ಪರ್ಮಾರ್ ಎಂಬಾತ ಸುರೇಂದ್ರ ನಗರದಲ್ಲಿ ಇಟಿಗೆ ತಿಳಿಸಿದ್ದಾರೆ.
ಸಮಾಧಿಯಾಲ ಗ್ರಾಮದಲ್ಲಿ ಜು.11ರಂದು ಸತ್ತ ದನಗಳನ್ನು ಸುಲಿದಿದ್ದ ಆರೋಪದಲ್ಲಿ ನಾಲ್ವರು ದಲಿತರಿಗೆ ಶಿವಸೇನಾ ಕಾರ್ಯಕರ್ತರು ಸಾರ್ವಜನಿಕವಾಗಿ ಬೆತ್ತಲೆ ಮಾಡಿ ಥಳಿಸಿದ್ದರು. ಸಮುದಾಯದ ಸದಸ್ಯರು ಪರಂಪರೆಯಿಂದ ಸತ್ತ ದನಗಳ ಚರ್ಮ ಸುಲಿದು, ಅಸ್ಥಿ ಪಂಜರಗಳನ್ನು ವಿಲೇವಾರಿ ಮಾಡುತ್ತಾರೆ.
ಗೋರಕ್ಷೆಯ ಮುಖವಾಡದಲ್ಲಿ ದಲಿತರ ಅಹವಾಲನ್ನು ಆಲಿಸದೆ ಶಿವಸೇನಾ ಕಾರ್ಯಕರ್ತರು ಅವರಿಗೆ ಥಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಇನ್‌ಸ್ಪೆಕ್ಟರ್ ಸಹಿತ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಏಳು ಮಂದಿ ಶಿವಸೇನಾ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಗುಜರಾತ್ ಸರಕಾರವು ಥಳಿತಕ್ಕೊಳಗಾದವರಿಗೆ ರೂ. 1 ಲಕ್ಷ ಪರಿಹಾರ ಘೋಷಿಸಿದ್ದು ಪ್ರಕರಣವನ್ನು ಸಿಐಡಿ ಅಪರಾಧ ವಿಭಾಗಕ್ಕೆ ಒಪ್ಪಿಸಿದೆ.
ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರನ್ನು ನೇಮಿಸಲಾಗುವುದು. 60 ದಿನಗಳೊಳಗಾಗಿ ಆರೋಪಪಟ್ಟಿ ದಾಖಲಿಸಲಾಗುವುದೆಂದು ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಘೋಷಿಸಿದ್ದಾರೆ.








