ಜನಪರ ಕಾಳಜಿಯ 'ಶೆಟ್ಟಿ ಡಾಕ್ಟರ್' ಡಾ. ಎಚ್. ವಿಠಲ್ ಶೆಟ್ಟಿ ಇನ್ನಿಲ್ಲ

ಮಂಗಳೂರು, ಜು. 19: ವೈದ್ಯಕೀಯ ವೃತ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕೆ.ಸಿ.ರೋಡ್ ನಿವಾಸಿ ಡಾ.ಎಚ್.ವಿಠಲ ಶೆಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನ ಹೊಂದಿದರು.ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಎರಡು ದಿನಗಳ ಹಿಂದೆ ನಗರದ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿತ್ತು. ಇಂದು ಸಂಜೆ ಸುಮಾರು 6 ಗಂಟೆ ಹೊತ್ತಿಗೆ ಅವರು ನಿಧನರಾದರು.ಕೋಟೆಕಾರು, ಬೀರಿ, ಮಾಡೂರು, ಸೋಮೇಶ್ವರ, ಉಚ್ಚಿಲ, ಕಿನ್ಯ. ಕೆ.ಸಿ.ರೋಡ್, ತಲಪಾಡಿ, ಉದ್ಯಾವರ, ಮಂಜೇಶ್ವರ ಸಹಿತ ಇತರ ಪ್ರದೇಶಗಳಲ್ಲಿ ಶೆಟ್ಟಿ ಡಾಕ್ಟರ್ ಎಂದೇ ಪರಿಚಿರಾಗಿದ್ದ ಡಾ.ಹೇರೂರು ವಿಠಲ ಶೆಟ್ಟಿ 48 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಈ ಪೈಕಿ ಸುಮಾರು 37 ವರ್ಷಗಳ ಕಾಲ ಸೋಮೇಶ್ವರ ಉಚ್ಚಿಲದಲ್ಲಿ ಕ್ಲಿನಿಕ್ ಹಾಗೂ ಅನಂತರ ಕೆ.ಸಿ.ರೋಡ್‌ಗೆ ಆಗಮಿಸಿ ಅಲ್ಲಿನ ಜಂಕ್ಷನ್‌ನಲ್ಲಿ ಕ್ಲಿನಿಕ್‌ನ್ನು ತೆರೆದು 9 ವರ್ಷಗಳ ಕಾಲ ಜನರಿಗೆ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದ್ದರು. 1968 ಕೇವಲ 75 ಪೈಸೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಕೆ.ವಿ.ಶೆಟ್ಟಿ, ಅನಂತರ ವರ್ಷಗಳಲ್ಲಿ 5 ರೂ. ಪಡೆದು ಇತ್ತೀಚಿನ ವರ್ಷಗಳವರೆಗೂ ತಮ್ಮ ಚಿಕಿತ್ಸೆಗಾಗಿ ರೋಗಿಗಳಿಂದ 10ರಿಂದ 15 ರೂ.ಫೀಸ್ ಪಡೆಯುತ್ತಿದ್ದರು ಎಂದು ಅವರಿಂದ ಚಿಕಿತ್ಸೆ ಪಡೆದ ರೋಗಿಗಳು ಆ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಹಲವು ವೈದ್ಯರು ವಿಧಿಸುತ್ತಿರುವ ಫೀಸ್‌ನಿಂದ ‘ಸೇವೆಯೋ, ವ್ಯಾಪಾರವೋ’ ಎಂದು ಕಂಗೆಡುತ್ತಿದ್ದ್ದ ರೋಗಿಗಳ ಪಾಲಿಕೆ ಇವರ ಮಾತು ಮತ್ತು ಆತ್ಮಸ್ಥೈರ್ಯವೇ ಔಷಧವಾಗಿತ್ತು. ತಮ್ಮ ವೈದ್ಯಕೀಯ ಸೇವೆಯಲ್ಲಿ ಬಡವರ, ವಿಧವೆಯರ, ಅಶಕ್ತರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದರು. ಮಾತ್ರವಲ್ಲದೆ ಅವರಿಂದ ಹೆಚ್ಚಿನ ಫೀಸ್‌ಗಳನ್ನು ಪಡೆಯಲೂ ಹಿಂಜರಿಯುತ್ತಿದ್ದರು ಎಂದು ಅವರಿಂದ ಚಿಕಿತ್ಸೆ ಪಡೆದರು ಹೇಳುತ್ತಾರೆ.





