ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ

ಹೊನ್ನಾವರ, ಜು.19: ಅಡಿಕೆ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಮತ್ತು ತೋಟದ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ವ್ಯವಸಾಯ ಸೇವಾ ಸಹಕಾರಿ ಸಂಘಗಳು, ಜನಪ್ರತಿನಿಧಿಗಳು ಮತ್ತು ಅಡಿಕೆ ತೋಟದ ಬೆಳೆಗಾರರು ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶರಾವತಿ ಸರ್ಕಲ್ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಶಿಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಪಂ ಸದಸ್ಯ ಶಿವಾನಂದ ಹೆಗಡೆ, ಅಡಿಕೆ ಬೆಳೆಗಾರರರು ಹಲವು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ಅಡಿಕೆ ಬೆಲೆಯ ಕುಸಿತ, ಕೊಳೆ ರೋಗ, ಕಾರ್ಮಿಕರು ಕಡಿಮೆಯಾಗಿರುವುದು, ಬರ ಮತ್ತು ಇನ್ನಿತರ ಕಾರಣಗಳಿಂದ ಬೆಳೆಗಾರರು ನಿರಂತರವಾಗಿ ಸಂಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಈಗ ಜೀವನೋಪಾಯಕ್ಕಾಗಿ ಅಡಿಕೆ ಬೆಳೆಯನ್ನೇ ಅವಲಂಬಿಸಿದ ರೈತರು ಇತ್ತೀಚಿನ ದಿನಗಳಲ್ಲಿ ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರಕಾರ ಅಡಿಕೆಗೆ ಬೆಂಬಲ ಬೆಲೆ ಘೋಷಿಸಿ ಸಕಾಲದಲ್ಲಿ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಅಡಿಕೆ ಬೆಳೆ ಮತ್ತು ಇತರ ತೋಟದ ಬೆಳೆಗಳಿಗೆ ಸಂಬಂಧಪಟ್ಟಂತೆ ಹವಾಮಾನ ಆಧಾರಿತ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿರುವುದನ್ನು ತಿಳಿದು ರೈತರು ಸಂತಸ ಪಟ್ಟಿದ್ದರು. ಆದರೆ ಈ ಬೆಳೆ ವಿಮೆ ಯೋಜನೆಯಲ್ಲಿ ಹಲವು ಸಮಸ್ಯೆಗಳಿರುವುದರಿಂದ ಈ ಬೆಳೆ ವಿಮೆ ರೈತರ ಕೈಗೆಟುಕುವುದು ಕಷ್ಟ ಸಾಧ್ಯವಾಗಿದೆ. ವಿಮಾ ಪ್ರೀಮಿಯಂ ಮೊತ್ತದಲ್ಲಿ ರೈತರ ಪಾಲು ಅಧಿಕವಾಗಿದ್ದು ಇದನ್ನು ಕಡಿಮೆಗೊಳಿಸಬೇಕು. ಉಳಿದ ಬೆಳೆ ವಿಮೆಗಳಂತೆ ಶೇಕಡಾ 2 ಕ್ಕಿಂತ ಕಡಿಮೆ ಇರಬೇಕು. ಬೆಳೆ ವಿಮೆಯನ್ನು ಖಾಸಗಿ ಕಂಪನಿಗಳಿಗೆ ನೀಡದೇ ಸರಕಾರವೇ ವಹಿಸಿಕೊಳ್ಳಬೇಕು, ತೋಟದ ಬೆಳೆಗಾರರಿಗೆ ಹೆಚ್ಚು ಸಬ್ಸಿಡಿ ಆಧಾರಿತ ಯಂತ್ರಗಳನ್ನು, ಉಪಕರಣಗಳನ್ನು ಒದಗಿಸಬೇಕು. ಅಡಿಕೆ, ತೆಂಗು ಮುಂತಾದ ತೋಟದ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರಿಗೆ ಅನುಕೂಲವಾಗುವಂತೆ ಕೃಷಿ ಹೊಂಡ, ಕೃಷಿ ಕಾಲುವೆ ಮುಂತಾದ ಯೋಜನೆಗಳನ್ನು ಸರಳೀಕರಣಗೊಳಿಸಿ ಎಲ್ಲ ರೈತರಿಗೂ ಸಿಗುವಂತೆ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿನೋದ ನಾಯ್ಕ, ರಾಯಲ್‌ಕೇರಿ, ಬಾಲಚಂದ್ರ ನಾಯ್ಕ, ಜಿ.ಎನ್.ಗೌಡ, ಟಿ.ಎಸ್.ಹೆಗಡೆ ಕೊಂಡಕೆರೆ, ತಾ.ಪಂ.ಸದಸ್ಯ ಗಣಪಯ್ಯ ಗೌಡ, ಆರ್.ಪಿ.ನಾಯ್ಕ, ಹರಿಯಪ್ಪ ನಾಯ್ಕ, ತಿಲಕ ಗೌಡ ಮುಂತಾದವರು ಉಪಸ್ಥಿತರಿದ್ದರು.







