ಮಾಧ್ಯಮರಂಗ ಬಲವಾಗಿದ್ದರೆ ಪ್ರಜಾಪ್ರಭುತ್ವ ಸದೃಢವಾಗಿರಲು ಸಾಧ್ಯ: ಅಮೀನ್ ಮಟ್ಟು

ಕಾರವಾರ, ಜು.19: ಸರಕಾರ ಉದ್ಯಮಿಗಳಿಗೆ ಅತಿ ಕಡಿಮೆ ಬಡ್ಡಿದರಲ್ಲಿ ನೀಡುತ್ತಿರುವ ಸಾಲದ ವ್ಯವಸ್ಥೆಗಳನ್ನು ಪತ್ರಿಕೆ, ಚಾನೆಲ್ ನಡೆಸುವವರಿಗೆ ನೀಡಿದರೆ, ಮಾಧ್ಯಮ ಕ್ಷೇತ್ರ ಜನರಿಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಲು ಸಾಧ್ಯ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.
ಅವರು ನಗರದ ರಾಬಿಯಾ ಫ್ಲಾಝಾ ಸಭಾಭವ ನದಲ್ಲಿ ನಡೆದ ಜಿಲ್ಲಾ ಕೇಂದ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾಧ್ಯಮರಂಗ ಬಲವಾಗಿದ್ದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಿರಲು ಸಾಧ್ಯ. ಪತ್ರಕರ್ತರು ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ ಸಮಾಜಮುಖಿ ವರದಿಗಳ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ. ಆ ಮೂಲಕ ಜನಸಾಮಾನ್ಯರ ವಿಶ್ವಾಸಕ್ಕೆ ಹತ್ತಿರವಾಗಬೇಕಿದೆ ಎಂದರು.
ಇಂದು ಮಾಧ್ಯಮ ಕ್ಷೇತ್ರ ಬದಲಾಗಿದ್ದು, ಉದ್ಯಮವಾಗಿ ಬೆಳೆಯುತ್ತಿದೆ. ಇದರಿಂದಾಗಿ ಸಾಮಾಜಿಕ ಜವಾಬ್ದಾರಿಗಳು ಬಲಿಯಾಗುತ್ತಿವೆ. ಆಧುನಿಕ ತಂತ್ರಜ್ಞಾನ ಮಾಧ್ಯಮಕ್ಕೆ ಬಹುದೊಡ್ಡ ಕೊಡುಗೆಯಾಗಿದ್ದು, ಅಪರಾಧ ಕೃತ್ಯಗಳ ವರದಿಗಳಿಂದಾಗಿ ಸಂಭ್ರಮಿಸುತ್ತಿವೆ. ತನಿಖೆ ಇಲ್ಲದೆ ಪೂರ್ವಾಗ್ರಹ ಮತ್ತು ದುರುದ್ದೇಶದ ಸುದ್ದಿಗಳು ಪ್ರಕಟವಾಗುವ ದಿನ ಮಾಧ್ಯಮದ ಸಾವು ಖಂಡಿತ ಎಂದು ಆತಂಕ ವ್ಯಕ್ತ ಪಡಿಸಿದರು.
ಇಂದಿನ ದಿನಗಳಲ್ಲಿ ಪತ್ರಕರ್ತರ ಮೇಲಿನ ಗೌರವ ಹಾಗೂ ಪತ್ರಿಕೆಗಳ ಬಗ್ಗೆ ಇರುವ ವಿಶ್ವಾಸ ನಿರಾಶಾದಾಯಕವಾಗಿದೆ. ಜನರು ತಮಗೆ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಪತ್ರಿಕೆ ಗಳು ತಮಗೆ ನ್ಯಾಯ ಒದಗಿಸುತ್ತವೆ ಎಂಬ ನಂಬಿಕೆಯಲ್ಲಿದ್ದಾರೆ ಎಂದರು.
ಪತ್ರಿಕೋದ್ಯಮ ಉದ್ಯಮವಾಗಿ ಮಾರ್ಪಟ್ಟಿರು ವುದರಿಂದ ಒತ್ತಡಗಳ ನಡುವೆ ಸಿಲುಕಿರುವ ಪತ್ರಕರ್ತರು ಸಮಾಜಮುಖಿ ಚಿಂತನೆ ಕೈಬಿಟ್ಟು ಲಾಭಕ್ಕಾಗಿ ಸುದ್ದಿ ಮಾಡುವ ಅನಿವಾರ್ಯತೆಯಿದೆ. ಹಿಂದಿನ ತಲೆಮಾರಿನ ಪತ್ರಕರ್ತರಿಗೆ ಹೋಲಿಸಿದರೆ ಇಂದಿನ ಪತ್ರಕರ್ತರಿಗೆ ತಂತ್ರಜ್ಞಾನದ ಲಾಭವಿದೆ. ಆದರೆ, ಯುವ ಪತ್ರಕರ್ತರು ಆದರ್ಶತೆ ಬೆಳೆಸಿಕೊಳ್ಳುವ ಬದಲು ಅಡ್ಡದಾರಿಯಿಂದ ಬಹು ಬೇಗ ಜನಪ್ರಿಯತೆ ಗಳಿಸಿಕೊಳ್ಳಲು ಮುಂದಾ ಗುತ್ತಿರುವುದು ವಿಷಾದನೀಯ ಎಂದ ಮಟ್ಟು, ವಸ್ತುನಿಷ್ಠ ವರದಿ ನೀಡುವ ಪತ್ರಕರ್ತ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸುತ್ತಲಿನ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ಜನಪ್ರತಿನಿಧಿಗಳ ಕಣ್ತೆರೆಸಿ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಗಳನ್ನು ಮಾಧ್ಯಮಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಪತ್ರಕರ್ತರಲ್ಲಿ ಹೊಸತನಕ್ಕೆ ತುಡಿಯುವ ಮನಸ್ಸಿರಬೇಕು. ಏಕಮುಖ ಚಿಂತನೆ ಬಿಟ್ಟು ಸಮಾಜವನ್ನು ಪ್ರೀತಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಪತ್ರಿಕೋದ್ಯಮ ವೃತ್ತಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅಭಿಪ್ರಾಯಿಸಿದರು.
ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಬಿ. ಹರಿಕಾಂತ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಬಿ. ಹರಿಕಾಂತ ಸ್ವಾಗತಿಸಿದರು. ಸಂದೀಪ ಸಾಗರ್ ಕಾರ್ಯಕ್ರಮ ನಿರೂಪಿಸಿದರು. ಸುಭಾಷ್ ಧೂಪದಹೊಂಡ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪಿ.ಕೆ.ರವಿಕುಮಾರ್ ಸನ್ಮಾನ ಪತ್ರ ವಾಚಿಸಿದರು. ಗಣೇಶ್ ಹೆಗಡೆ ಅತಿಥಿಗಳನ್ನು ಪರಿಚಯಸಿದರು. ಅಚ್ಯುತ ಕುಮಾರ್ ಯಲ್ಲಾಪುರ ವಂದಿಸಿದರು.
ಟಾಗೋರ್ ಪ್ರಶಸ್ತಿ ಪ್ರದಾನ, ಪತ್ರಿಕಾ ವಿತರಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಪತ್ರಿಕೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸಾಧನೆ ಗೈದಿರುವ ಪತ್ರಕರ್ತರಿಗೆ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ರವೀಂದ್ರನಾಥ ಟಾಗೋರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಪತ್ರಕರ್ತ ಪ್ರಭಾತ್ ಶೆಣೈ, ಪತ್ರಕರ್ತ ಸುನೀಲ್ ಹಣಕೋಣ ಹಾಗೂ ಸಮಯ ಸುದ್ದಿವಾಹಿನಿಯ ಕಾರವಾರ ವಿಭಾಗದ ವೀಡಿಯೊ ಜರ್ನಲಿಸ್ಟ್ ಕಿಶನ್ ಗುರವ್ ಅವರಿಗೆ ಮುಖ್ಯ ಅತಿಥಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಅಲ್ಲದೆ, ಹಲವಾರು ವರ್ಷಗಳಿಂದ ನಗರದಲ್ಲಿನ ಪತ್ರಿಕೆ ವಿತರಕರನ್ನೂ ಇದೇ ವೇಳೆ ಸನ್ಮಾನಿಸಲಾಯಿತು.







