ಜು.27ರಂದು ರಾಮೇಶ್ವರದಲ್ಲಿ ಕಲಾಂ ಸ್ಮಾರಕಕ್ಕೆ ಅಡಿಗಲ್ಲು: ಪಾರಿಕ್ಕರ್
ಹೊಸದಿಲ್ಲಿ, ಜು.19: ಮಾಜಿ ರಾಷ್ಟ್ರ ಪತಿ ಎಪಿಜೆ ಅಬ್ದುಲ್ ಕಲಾಂರ ಸ್ಮಾರಕವೊಂದರ ನಿರ್ಮಾಣಕ್ಕಾಗಿ, ಅವರ ಪಾರ್ಥಿವ ಶರೀರವನ್ನು ದಫನ ಮಾಡಿದ, ತಮಿಳುನಾಡಿನ ರಾಮೇಶ್ವರ ದಲ್ಲಿ ಜು.27ರಂದು ಅಡಿಗಲ್ಲು ಹಾಕಲಾಗುವು ದೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಮಂಗಳವಾರ ತಿಳಿಸಿದ್ದಾರೆ.
ಟಿಎಂಸಿ ಸದಸ್ಯ ಡೆರೆಕ್ ಒ’ಬ್ರಿಯಾನ್ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಇಂದು ಗುರುಪೂರ್ಣಿಮೆಯ ದಿನವಾಗಿದೆ. ಜೀವನದಲ್ಲಿ ನಮಗೆ ಉತ್ತಮ ವಿಚಾರಗಳ ಬಗ್ಗೆ ಬೋಧನೆ ನೀಡಿದವರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಆದಾಗ್ಯೂ, ಡಾ. ಕಲಾಂ ಚಿರ ನಿದ್ರೆಯಲ್ಲಿರುವ ಸ್ಥಳವು ನಿರ್ಲಕ್ಷಿತ ಹಾಗೂ ನಾದುರಸ್ತಿಯ ಸ್ಥಿತಿಯಲ್ಲಿದೆ ಎಂದರು.
ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಎಡಿಎಂಕೆ ಸದಸ್ಯರೂ ಈ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾರಿಕ್ಕರ್, ತಮಿಳುನಾಡು ಸರಕಾರವು ಕಲಾಂರ ಸ್ಮಾರಕ ನಿರ್ಮಿಸುವ ಕೇಂದ್ರದ ಪ್ರಯತ್ನಕ್ಕೆ ಸಹಕಾರ ನೀಡುತ್ತಿದೆ. ಸ್ಮಾರಕಕ್ಕಾಗಿ ಕೇಂದ್ರವು ಇನ್ನಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಇಚ್ಛಿಸಿದುದರಿಂದ ಪ್ರಾಥಮಿಕವಾಗಿ ಕಾರ್ಯ ವಿಳಂಬವಾಗಿತ್ತು. 1.8 ಎಕ್ರೆ ಸ್ಥಳ ನೀಡಲಾಗಿತ್ತು. ಆದರೆ ಸರಕಾರ 5 ಎಕ್ರೆ ಜಾಗ ಬಯಸಿತ್ತು. ಲಗ್ತೆ ಜಮೀನಿನ ನೋಂದಣಿರಹಿತ ಮಾರಾಟಗಳು ಹಾಗೂ ಬಳಿಕ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಿಂದಾಗಿ ಪ್ರಕ್ರಿಯೆ ಇನ್ನಷ್ಟು ನಿಧಾನವಾಯಿತು ಎಂದರು.
ಕಲಾಂರ ಪಾರ್ಥಿವ ಶರೀರವನ್ನು ದಫನ ಮಾಡಿದ ಸ್ಥಳದಲ್ಲೇ, ಜು.27ರಂದು ಸ್ಮಾರಕಕ್ಕೆ ಅಸ್ತಿವಾರ ಹಾಕಲಾಗುವುದೆಂದು ಅವರು ತಿಳಿಸಿದರು.
ಜು.27ರಂದು ಕಲಾಂ ಅವರ ಮೊದಲ ಪುಣ್ಯ ತಿಥಿಯಾಗಿರುತ್ತದೆ.





