ಹಾಕಿ ಪಟು ಧರ್ಮವೀರ್ ಒಲಿಂಪಿಕ್ಸ್‌ಗೆ ಅಲಭ್ಯ

ಚಂಡೀಗಡ, ಜು.19: ಬೆನ್ನುನೋವಿನ ಕಾರಣದಿಂದ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ಆಟಗಾರ ಧರ್ಮವೀರ್ ಸಿಂಗ್‌ಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಕಳೆದ ತಿಂಗಳು 26ರ ಹರೆಯದ ಹಾಕಿ ಮಿಡ್‌ಫೀಲ್ಡರ್ ಧರ್ಮವೀರ್ ಸಿಂಗ್ ಒಲಿಂಪಿಕ್ಸ್‌ಗೆ ಸಜ್ಜಾಗುವ ಗುರಿ ಹಾಕಿಕೊಂಡಿದ್ದರು. ಆದರೆ, ಚಾಂಪಿಯನ್ ಟ್ರೋಫಿಗೆ ಮೊದಲು ನಡೆದ ಅಭ್ಯಾಸದ ವೇಳೆ ಬೆನ್ನುನೋವು ಕಾಣಿಸಿಕೊಂಡಿತು.
ಎಂಆರ್‌ಐ ಸ್ಕಾನಿಂಗ್‌ನ ಬಳಿಕ ವೈದ್ಯರ ಬಳಿ ಹೋದಾಗ ಧರ್ಮವೀರ್‌ಗೆ ಆಗಿರುವ ಗಾಯ ರಿಯೋ ಗೇಮ್ಸ್‌ನಿಂದ ಹೊರಗುಳಿಯುವ ಮಟ್ಟಿಗೆ ಗಂಭೀರ ವಾಗಿದ್ದು ಕಂಡುಬಂತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಧರ್ಮವೀರ್‌ಗೆ ಸತತ ಎರಡನೆ ಒಲಿಂಪಿಕ್ಸ್ ಭಾಗವಹಿಸುವ ಅವಕಾಶ ಕೈ ತಪ್ಪಿತು.
ರೋಪರ್‌ನ ಖೈರಾಬಾದ್ ಹಳ್ಳಿಯಿಂದ ಬಂದಿರುವ ಧರ್ಮವೀರ್ ಅತ್ಯುತ್ತಮ ಪ್ರದರ್ಶನದಿಂದ ಭಾರತದ ಹಾಕಿ ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದರು. ಅವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ತಂಡ ಹಾಗೂ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ ತಂಡದ ಭಾಗವಾಗಿದ್ದರು.
‘‘ನಾನು ಗಾಯಗೊಂಡ ಸಮಯ ಕೆಟ್ಟದ್ದಾಗಿದೆ. ಕೋಚ್ ರೊಲೆಂಟ್ ಒಲ್ಟಮನ್ಸ್ ನನ್ನೊಂದಿಗೆ ಹಾಗೂ ವೈದ್ಯರೊಂದಿಗೆ ದೀರ್ಘ ಚರ್ಚೆ ನಡೆಸಿದ್ದಾರೆ. ಗಾಯದೊಂದಿಗೆ ಆಡುವ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಲಾಯಿತು’’ ಎಂದು ಧರ್ಮವೀರ್ ಹೇಳಿದ್ದಾರೆ.







