ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯ ನಿಲ್ಲಲಿ

ನ್ಯಾಯದ ವಿರುದ್ಧ ಅನ್ಯಾಯ, ಸತ್ಯದ ವಿರುದ್ಧ ಅಸತ್ಯ, ಸಮಾನತೆಯ ವಿರುದ್ಧ ಅಸಮಾನತೆ ಶತಮಾನಗಳಿಂದಲೂ ಸಂಘರ್ಷ ನಡೆಸುತ್ತಲೇ ಬಂದಿವೆ. ಆದ್ದರಿಂದ ಅದೆಷ್ಟೋ ಸಾವು, ನೋವು, ಅನ್ಯಾಯ, ಅಪಮಾನ ಗಳಿಗೆ ಕಾರಣವಾಗಿದೆ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.
ಭಗವಾನ್ ಬುದ್ಧ ಗುರುವಿನ ಕರುಣಾಳು ಮೈತ್ರಿಯನ್ನು ಸಹಿಸಲಾರದ ಪುರೋಹಿತರು ಕುತಂತ್ರದಿಂದ ಬುದ್ಧನನ್ನು ಕೊಲ್ಲಬೇಕೆಂದು ಸಂಚು ರೂಪಿಸಿ ಒಮ್ಮೆ ಅವರಲ್ಲಿಗೆ ಹೋಗಿ, ‘‘ಗುರುಗಳೇ ನಾವು ಯಜ್ಞ ಮಾಡಬೇಕಾಗಿದೆ. ಅದಕ್ಕೆ ಒಂದು ಪ್ರಶಸ್ತವಾದ ಸ್ಥಳ ಸಿಗುತ್ತಿಲ್ಲ. ಆದ್ದರಿಂದ ತಾವು ದಯಮಾಡಿ ಅಂಗಾತ ಮಲಗಿದರೆ ನಿಮ್ಮ ಎದೆಯ ಮೇಲೆ ಯಜ್ಞ ಕಾರ್ಯ ನೆರವೇರಿಸಿಕೊಳ್ಳುತ್ತೇವೆ’’ ಎಂದು ಕೇಳಿಕೊಳ್ಳುತ್ತಾರಂತೆ. ಹಾಗೆಯೇ ಶಾಂತಿಧೂತ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು. ಸಾಕ್ರೇಟಿಸ್‌ಗೆ ವಿಷ ಉಣಿಸಲಾಯಿತು. ಗೆಲಿಲಿಯೊರನ್ನು ಹಿಂಸಿಸಲಾಯಿತು. ಹೀಗೆ ಈ ಭೂಮಿಯ ಮೇಲೆ ಪ್ರತಿದಿನವೂ, ಪ್ರತಿಕ್ಷಣವೂ ನ್ಯಾಯದ ವಿರುದ್ಧ ಅನ್ಯಾಯ, ಸತ್ಯ, ಸಮಾನತೆಯ ವಿರುದ್ಧ ಅಸತ್ಯ, ಅಸಮಾನತೆಗಳು ಸಂಘರ್ಷ ನಡೆಸುತ್ತಲೇ ಇವೆ. ಮಾನವೀಯತೆಗೆ, ಪ್ರಗತಿಗೆ, ಸಮಾನತೆಗೆ, ಹೊಸತನಕ್ಕೆ ಮಾರಕವಾಗುತ್ತಲೇ ಇದೆ. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ಪ್ರೊ. ಮಹೇಶ್ ಚಂದ್ರಗುರುರವರು ಜೈಲುವಾಸ ಅನುಭವಿಸಿ ಕೆಲಸ ಕಳೆದುಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿದಾಗ ಅವರ ಹೃದಯಾಂತರಾಳದ ಮಾತುಗಳಿಂದ ಅನಾವರಣಗೊಂಡ ಸತ್ಯಾಂಶಗಳಿವು.
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಮಾಯಣ, ಮಹಾಭಾರತಗಳ ಪುನಶ್ಚೇತನಗಳ ಬಗ್ಗೆ ಆರೋಗ್ಯಕರ ಚರ್ಚೆಯಾಗಬೇಕೆಂಬ ಉದ್ದೇಶದಿಂದ ಡಾ. ಬಂಜಗೆರೆ ಜಯಪ್ರಕಾಶ್, ಪ್ರೊ. ಅರವಿಂದ ಮಾಲಗತ್ತಿ, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಮಹೇಶ್ ಚಂದ್ರಗುರು, ಪ್ರೊ. ಭಗವಾನ್ ಹಾಗೂ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ಬಲಪಂಥೀಯ ಚಿಂತನೆಯ ಪೇಜಾವರ ಸ್ವಾಮಿ, ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯಾ, ಬಿಜೆಪಿಯ ಲೋಕಸಭೆ ಸದಸ್ಯ ಪ್ರತಾಪ ಸಿಂಹ, ಚಕ್ರವರ್ತಿ ಸೂಲಿಬೆಲೆಯವರನ್ನೂ ಆಹ್ವಾನಿಸಲಾಯಿತು. ಸಂವಾದವನ್ನು ಸವಾಲಾಗಿ ಸ್ವೀಕರಿಸದ ಬಲಪಂಥೀಯ ನಾಯಕರು ಸರಕಾರದ ಅಧಿಕಾರವನ್ನು ಬಳಸಿಕೊಂಡು ಕಾರ್ಯಕ್ರಮವನ್ನು ರದ್ದು ಮಾಡಿದರು. ವೌಢ್ಯತೆಯಿಂದ ಮಾನವ ಹಕ್ಕುಗಳು ವಿವಿಧ ಕಾಲಘಟ್ಟದಲ್ಲಿ ಹೇಗೆ ಹಾಳಾಗಿವೆ ಎನ್ನುವುದರ ಬಗ್ಗೆ ಪ್ರೊ. ಮಹೇಶ್ ಚಂದ್ರಗುರು ಅವರನ್ನು, ‘‘ಸರ್, ರಾಮರಾಜ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?’’ ಎಂದು ಕೇಳಿದಾಗ, ‘‘ನೋಡಿ ರಾಮರಾಜ್ಯ ಎಂದೂ ಜನಪರವಾಗಿರಲಿಲ್ಲ, ಗರ್ಭಿಣಿ ಹೆಂಡತಿಯನ್ನು ರಾಮ ಕಾಡಿಗೆ ಅಟ್ಟುತ್ತಾನೆ. ತನ್ನ ಮಕ್ಕಳಾದ ಲವ, ಕುಶರಿಗೆ ತಂದೆಯ ಪ್ರೀತಿಯನ್ನು ಸಹ ಕೊಡುವುದಿಲ್ಲ. ಶಂಭೂಕನೆಂಬ ಶೂದ್ರ ತಪಸ್ವಿಯು ತಲೆಕೆಳಗೆ ಮಾಡಿ ತಪಸ್ಸು ಮಾಡುತ್ತಿರುವಾಗ ವಿಪ್ರರ ಆದೇಶದಂತೆ ಅವನ ತಲೆಯನ್ನು ರಾಮ ಕಡಿಯುತ್ತಾನೆ. ವಾಲಿಯನ್ನು ಮೋಸದಿಂದ ಕೊಲ್ಲುತ್ತಾನೆ. ಹೀಗೆ ರಾಮ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದು, ಒಟ್ಟಾರೆ ರಾಮರಾಜ್ಯ ವೈದಿಕಶಾಹಿಗಳಿಗೆ ಅನುಕೂಲಕರವಾಗಿತ್ತು’’ ಎಂದು ವಿವರಿಸುತ್ತಾರೆ.
‘‘ಅಪ್ಪಾಜಿಗೌಡ, ರವಿಶಂಕರ್, ಕೆ.ಎಸ್.ರಂಗಪ್ಪ ಇವರೆಲ್ಲರೂ ಗೌಡ ಜಾತಿಯವರಾಗಿದ್ದು, ಇವರು ಪಿತೂರಿ ಮಾಡಿ ನನಗೆ ತೊಂದರೆ ಕೊಟ್ಟಿದ್ದಾರೆ. ಇದರ ಹಿಂದೆ ವಿಶ್ವವಿದ್ಯಾನಿಲಯದ ಆಡಳಿತಾತ್ಮಕ ಹಾಗೂ ರಾಜಕೀಯ ಪಿತೂರಿ ಇದೆ. ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ಅಕ್ರಮ ಕಾಮಗಾರಿ, ಸ್ವಜಾತಿ ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದುದರ ಬಗ್ಗೆ ಎರಡು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ನಮ್ಮ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ 900 ಜನ ಬೋಧಕೇತರ ಸಿಬ್ಬಂದಿ ನೇಮಕ ಮಾಡಲಾಯಿತು. ಅದರಲ್ಲಿ 600 ಜನರು ಒಕ್ಕಲಿಗ ಜಾತಿಯವರನ್ನೇ ತೆಗೆದುಕೊಳ್ಳಲಾಗಿದೆ.’’ ಇಡೀ ಇಂಡಿಯಾ ದೇಶದಲ್ಲಿನ ಯೂನಿವರ್ಸಿಟಿಗಳಲ್ಲಿಯೇ ಇಲ್ಲಿನ ಕುಲಪತಿಯೇ ಅತೀ ಶ್ರೀಮಂತ ಕುಲಪತಿ. ಅವರು ಜಾಗ್ವಾರ್ ಕಾರಿನಲ್ಲಿ ಓಡಾಡುತ್ತಾರೆ. ಅವರ ಮೇಲಿನ ಅನೇಕ ಪ್ರಕರಣಗಳು ರಾಜ್ಯಪಾಲರ ಅಂಗಳದಲ್ಲಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಯಾವಾಗಲೂ ಬಂದು ಕುಲಪತಿಗಳನ್ನು ರಕ್ಷಿಸಿ ಎಂದು ಕೇಳಿಕೊಳ್ಳುತ್ತಿದ್ದದ್ದು, ಇದರಿಂದ ಬೇಸರಗೊಂಡಿದ್ದ ರಾಜ್ಯಪಾಲರು ಎಚ್.ಡಿ. ದೇವೇಗೌಡರಿಗೆ ಸಂದರ್ಶನ ನಿರಾಕರಿಸಿದ್ದರು. ಇತ್ತೀಚೆಗೆ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪ್ರಗತಿಪರರು, ದಲಿತರು, ಅಲ್ಪಸಂಖ್ಯಾತರು ಸೇರಿ ವಿಚಾರವಾದಿ ಕೆ.ಎಸ್.ಭಗವಾನ್‌ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದು, ಆದರೆ ಎಚ್.ಡಿ. ದೇವೇಗೌಡರು ಮತ್ತು ಕುಲಪತಿಯವರ ಜಾತಿವಾದಿತನದಿಂದ ಕೋಮುವಾದಿ ಬಿಜೆಪಿಗೆ ಓಟು ಹಾಕಿ ಪಕ್ಷ ನಿಷ್ಠೆಯನ್ನು ಮೆರೆದರು. ಆಗ ಮಹೇಶ್ ಚಂದ್ರಗುರು ‘ಸೋತು ಗೆದ್ದ ಕೆ.ಎಸ್. ಭಗವಾನ್’ ಎಂಬ ಲೇಖನವನ್ನು ಬರೆದಿದ್ದರು. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಕರುನಾಡ ಸೇನೆಯ ಮೈಸೂರು ಜಿಲ್ಲಾಧ್ಯಕ್ಷರಾದ ರವಿಶಂಕರ್‌ರವರು, ಹಿಂದೂ ದೇವರು ಶ್ರೀರಾಮನನ್ನು ಅವಮಾನಕಾರಿಯಾಗಿ ನಿಂದಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಅವರು ಕೂಡ ಅದೇ ಸಮುದಾಯದವರು. ಇವರೆಲ್ಲರ ಕುತಂತ್ರದಿಂದ ಮಹೇಶ್ ಚಂದ್ರಗುರುರವರು ವಿಶ್ವವಿದ್ಯಾನಿಲಯದಲ್ಲಿದ್ದರೂ, ಮೈಸೂರಿನಲ್ಲೇ ವಾಸವಾಗಿದ್ದರೂ ನ್ಯಾಯಾಲಯದಿಂದ ಬಂದಿರುವ ಸಮನ್ಸ್ ಅವರಿಗೆ ತಲುಪದ ಹಾಗೆ ಮಾಡಿ, ಅವರು ಜೈಲಿಗೆ ಹೋಗುವಂತೆ ಷಡ್ಯಂತ್ರ ರೂಪಿಸಿದ್ದರು.







