ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಮೃತದೇಹ ಪತ್ತೆ
ಸುಬ್ರಹ್ಮಣ್ಯ, ಜು.19: ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನ ಘಟ್ಟದ ಬಳಿ ರವಿವಾರದಂದು ತೀರ್ಥ ಸ್ನಾನಕ್ಕೆಂದು ನೀರಿಗೆ ಇಳಿದ ಬೆಂಗಳೂರಿನ ಡಿ.ಆರ್. ವೆಂಕಟೇಶ್ (31) ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು, ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದ ನೆಲಮಂಗಲ ದಾಬಸ್ ಪೇಟೆ ನಿವಾಸಿ ವೆಂಕಟೇಶ್ ರವಿವಾರ ಸಂಬಂಧಿಕರ ಜೊತೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಮುಂಜಾನೆ ಸ್ನಾನ ಘಟ್ಟದ ಬಳಿಯ ಅಂಗಡಿಯೊಂದರಲ್ಲಿ ಟೀ ಕುಡಿದು ಸ್ನಾನಕ್ಕೆಂದು ನೀರಿಗೆ ಇಳಿದಿದ್ದ ಅವರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.
ಪುತ್ತೂರಿನ ಅಗ್ನಿಶಾಮಕ ತಂಡ ವೆಂಕಟೇಶ್‌ರಿಗಾಗಿ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ಮಂಗಳವಾರ ಪುತ್ತೂರು ಅಗ್ನಿಶಾಮಕ ಮತ್ತು ಸುಳ್ಯದ ಗೃಹ ರಕ್ಷಕ ದಳವು ಮತ್ತೆ ಕಾರ್ಯಾಚರಣೆ ನಡೆಸಿದಾಗ ಕುಮಾರಧಾರಾ ಸ್ನಾನ ಘಟ್ಟದಿಂದ 100ಮೀ ಕೆಳಗಿನ ತಿರುವು ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸುಳ್ಯ ವೃತ್ತ ನಿರೀಕ್ಷಕ ಕೃಷ್ಣಯ್ಯರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಎಸ್ಸೈ ಐತ್ತು ನಾಯ್ಕ ಪ್ರಕರಣ ದಾಖಲಿಸಿದ್ದಾರೆ.





