ಪೌರ ಕಾರ್ಮಿಕರಿಗೆ ‘ಗೃಹ ಭಾಗ್ಯ’ ಯೋಜನೆ ಜಾರಿ: ಈಶ್ವರ ಖಂಡ್ರೆ

ಬೆಂಗಳೂರು, ಜು. 19: ರಾಜ್ಯದಲ್ಲಿನ ಪೌರ ಕಾರ್ಮಿಕರಿಗೆ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿಕೊಡುವ ‘ಗೃಹ ಭಾಗ್ಯ’ ಯೋಜನೆಯನ್ನು ಶೀಘ್ರದಲ್ಲೇ ಜಾರಿ ಗೊಳಿಸಲಾಗುವುದು ಎಂದು ಪೌರಾಡಳಿತ ಇಲಾಖೆ ಸಚಿವ ಈಶ್ವರ ಖಂಡ್ರೆ ಇಂದಿಲ್ಲಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆ ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸ ಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರಿಗೆ ಮೂರು ಸಾವಿರ ರೂ.ಸಂಕಷ್ಟ ಭತ್ತೆ ನೀಡಲಾಗುವುದು. ಅಲ್ಲದೆ, ಪೌರ ಕಾರ್ಮಿಕರಿಗೆ ಆರು ಲಕ್ಷ ರೂ.ವೆಚ್ಚದಲ್ಲಿ ಗೃಹ ಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮಸಭೆಗಳ ಮಾದರಿಯಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಮಟ್ಟದಲ್ಲಿ ಸಭೆ ನಡೆಸಿ ಫಲಾನುಭವಿಗಳ ಆಯ್ಕೆ ಮಾಡಲು ಪುರಸಭಾ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದ ಅವರು, ಪಟ್ಟಣ ಹಾಗೂ ನಗರ ಪ್ರದೇಶದ ಬಡ, ಮಧ್ಯಮ ವರ್ಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಕೆಪಿಎಸ್ಸಿಗೆ ಪ್ರಸ್ತಾವನೆ: ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಖಂಡ್ರೆ ಸ್ಪಷ್ಟನೆ ನೀಡಿದರು.
ಪೌರಾಡಳಿತ ಇಲಾಖೆಯಲ್ಲಿ ತರಬಹುದಾದ ಸುಧಾರಣೆಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ್ದು,ಹಲವು ಮಹತ್ವದ ಸಲಹೆಗಳನ್ನು ಸದಸ್ಯರು ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.





