ಮರಳು ಗಣಿಗಾರಿಕೆಗೆ ಏಕಗವಾವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ಶಿಫಾರಸು

ಬೆಂಗಳೂರು, ಜು.19: ಮರಳು ಗಣಿಗಾರಿಕೆಗೆ ವಿವಿಧ ಇಲಾಖೆ ಗಳಿಂದ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಅಕ್ರಮ ಮರಳು ಗಣಿಗಾರಿಕೆ ಸಂಬಂಧ ರಚಿಸಲಾಗಿದ್ದ ವಿಧಾನಸಭಾ ಸದಸ್ಯರ ಸದನ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಸಮಿತಿಯ ಅಧ್ಯಕ್ಷ ಶಾಸಕ ಡಾ.ರಫೀಕ್ ಅಹ್ಮದ್ ಸೋಮವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಧರಣಿ ನಡುವೆಯೇ 21 ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಮಂಡಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸುಪರ್ದಿಯಲ್ಲಿರುವ ಮರಳು ಬ್ಲಾಕ್‌ಗಳನ್ನು ಖಾಸಗಿಯವರಿಗೆ ಇ-ಟೆಂಡರ್ ಮೂಲಕ ಹರಾಜು ನಡೆಸಿ ಗುತ್ತಿಗೆ ನೀಡಬೇಕು. ಹಾಗೂ ನೈಸರ್ಗಿಕ ಮರಳು ನಿಕ್ಷೇಪದ ಬ್ಲಾಕ್‌ಗಳನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗದೆ.
ಲೋಕೋಪಯೋಗಿ ಇಲಾಖೆಯಿಂದ ಸಮರ್ಪಕ ಮರಳು ಗಣಿಗಾರಿಕೆ, ಸಾಗಣೆ ಮತ್ತು ಪೂರೈಕೆ ಮಾಡಲು ಸಾಧ್ಯವಾಗದ ಕಾರಣ ಖಾಸಗಿಯವರಿಗೆ ಗುತ್ತಿಗೆ ನೀಡಲು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಿ, ರಾಜ್ಯದಲ್ಲಿ ಮರಳು ಸಾಗಣೆಗೆ ಮುಕ್ತ ಅವಕಾಶ ಒದಗಿಸಬೇಕು. ಹಾಗೂ ಫಿಲ್ಟರ್ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಪ್ರತಿ ಜಿಲ್ಲೆಯಲ್ಲೂ ಮರಳು ಬ್ಲಾಕ್‌ಗಳನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು. ಜಿಲ್ಲಾ ಮರಳು ಸಮಿತಿಗೆ ದರ ನಿಗದಿಪ ಡಿಸಲು ಅಧಿಕಾರ ನೀಡುವ ಜತೆಗೆ ಮರಳು ಮಾರಾಟದ ದರ ನಿಯಂತ್ರಣಕ್ಕೆ ಟೆಂಡರ್ ಶರತ್ತು ವಿಧಿಸಬೇಕು. ನದಿ ದಂಡೆ ಯಿಂದ ತೆಗೆಯುವ ಮರಳನ್ನು ಮುಖ್ಯರಸ್ತೆಗೆ ಸಾಗಿಸಲು ಅವಶ್ಯವಿರುವ ರಸ್ತೆ ಸೌಕರ್ಯ ಒದಗಿಸಲು ರಾಜಸ್ವದಲ್ಲಿ ಶೇ.25ರಷ್ಟು ಮೊತ್ತವನ್ನು ಸ್ಥಳೀಯ ಪಂಚಾಯತ್‌ಗಳಿಗೆ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.
ಸ್ಥಳೀಯ ಗಣಿಗಾರಿಕೆಯಿಂದ ಬಾಧಿತ ಗ್ರಾಮಗಳ ಅಭಿವೃದ್ಧಿ ಗಾಗಿ ರಾಜಧನದ ಮೇಲೆ ಹೆಚ್ಚುವರಿಯಾಗಿ ಜಿಲ್ಲಾ ಗಣಿ ನಿಧಿ ಸಂಗ್ರಹಿಸಬೇಕು. ಪ್ರತಿ ಬ್ಲಾಕ್‌ನಲ್ಲಿ ಸಿಗುವ ಮರಳಿನಲ್ಲಿ ಶೇ.25ರಷ್ಟು ಪ್ರಮಾಣವನ್ನು ಸರಕಾರಿ ಕಾಮಗಾರಿಗಳಿಗೆ ನಿಗದಿತ ದರದಲ್ಲಿ ಪೂರೈಸಬೇಕು. ಮರಳಿನ ನಿಕ್ಷೇಪ ಇಲ್ಲದ ಜಿಲ್ಲೆಗಳಿಗೆ ಮರಳು ಸಾಗಿಸಲು ಲಾರಿಗಳ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಶಿಫಾರಸಿನಲ್ಲಿ ಸ್ಪಷ್ಟ ಪಡಿಸಲಾಗಿದೆ.
ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾದವರಿಗೆ ಎರಡು ವರ್ಷ ಜೈಲು ಅಥವಾ ಒಂದು ಲಕ್ಷ ರೂ.ದಂಡ ವಿಧಿಸಲು ಹಾಗೂ ಸಾಗಣೆ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ನಿಯಮದಲ್ಲಿ ಅಗತ್ಯ ತಿದ್ದುಪಡಿ ತರಬೇಕು. ಎಂ.ಸ್ಯಾಂಡ್ ಬಳಕೆಗೆ ಉತ್ತೇಜನ ನೀಡಬೇಕು. ಎಂ.ಸ್ಯಾಂಡ್ ಉತ್ಪಾದನಾ ಘಟಕ ತೆರೆಯಲು ಮುಂದೆಬರುವ ಉದ್ಯಮಿಗಳಿಗೆ ಸಬ್ಸಿಡಿ ಹಾಗೂ ಇತರೆ ಸೌಕರ್ಯ ನೀಡಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.





