ಬುದ್ಧಿಮತ್ತೆಗೆ ಮೆದುಳಿನ ಹೆಚ್ಚಿನ ಸಂಪರ್ಕ ಜಾಲ ಕಾರಣ
ಲಂಡನ್, ಜು. 19: ಮೆದುಳಿನ ವಿವಿಧ ಭಾಗಗಳ ನಡುವೆ ಹೆಚ್ಚಿನ ಸಂಪರ್ಕ ಹೊಂದಿರುವ ಜನರು ಹೆಚ್ಚು ಬುದ್ಧಿವಂತ ಮತ್ತು ಸೃಜನಶೀಲರಾಗಿರುತ್ತಾರೆ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.
ಮಾನವ ಬುದ್ಧಿಮತ್ತೆಯನ್ನು ನಿರೂಪಿಸಲು ಮತ್ತು ಅಳೆಯಲು ಹೊರಟ ವಿಜ್ಞಾನಿಗಳು ಮೊದಲ ಬಾರಿಗೆ ಈ ಅಂಶವನ್ನು ಕಂಡುಕೊಂಡಿದ್ದಾರೆ.
ಮೆದುಳಿನ ಕೆಲಸಗಳನ್ನು ಗುರುತಿಸಲು ಹಾಗೂ ಮೆದುಳಿನ ವಿವಿಧ ಭಾಗಗಳು ವಿವಿಧ ಸಮಯಗಳಲ್ಲಿ ಹೇಗೆ ಪರಸ್ಪರ ಸಂವಹನ ನಡೆಸುತ್ತವೆ ಎಂಬುದನ್ನು ಪತ್ತೆಹಚ್ಚಲು ಬ್ರಿಟನ್‌ನ ವಾರ್ವಿಕ್‌ನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿಯಾನ್‌ಫೆಂಗ್ ಫೆಂಗ್ ನೇತೃತ್ವದ ಸಂಶೋಧಕರು ಪ್ರಯೋಗಗಳನ್ನು ನಡೆಸುತ್ತಿದ್ದರು. ಬುದ್ಧಿಮತ್ತೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿಯುವುದು ಅವರ ಉದ್ದೇಶವಾಗಿತ್ತು.
ಮೆದುಳಿನ ವಿವಿಧ ಭಾಗಗಳು ಹೆಚ್ಚು ಬಾರಿ ಪರಸ್ಪರ ಸಂಪರ್ಕ ಹೊಂದಿದಷ್ಟೂ ವ್ಯಕ್ತಿಯ ಬುದ್ಧಿಮತ್ತೆ ಮತ್ತು ಸೃಜನಶೀಲತೆ ಹೆಚ್ಚುತ್ತದೆ ಎಂದು ಸಂಶೋಧನಾ ತಂಡ ಹೇಳಿದೆ.
ಮಾನವ ಬುದ್ಧಿಮತ್ತೆಯ ಹೆಚ್ಚು ನಿಖರ ತಿಳುವಳಿಕೆಯು ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ಕ್ಷೇತ್ರದಲ್ಲಿನ ಭವಿಷ್ಯದ ಬೆಳವಣಿಗೆಗಳಿಗೆ ಸಹಾಯಕವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.





