ಕಾಶ್ಮೀರ ಹಿಂಸಾಚಾರ: ಚೀನಾ ‘‘ಕಳವಳ’’
ಬೀಜಿಂಗ್, ಜು. 19: ಕಾಶ್ಮೀರದಲ್ಲಿ ನೆಲೆಸಿರುವ ಅಶಾಂತ ಪರಿಸ್ಥಿತಿಯ ಬಗ್ಗೆ ಸೋಮವಾರ ಅಪರೂಪದ ಹೇಳಿಕೆಯೊಂದನ್ನು ನೀಡಿರುವ ಚೀನಾ, ಅಲ್ಲಿನ ಪರಿಸ್ಥಿತಿಯನ್ನು ‘‘ಸರಿಯಾಗಿ ನಿಭಾಯಿಸಲಾಗುವುದು’’ ಹಾಗೂ ‘‘ಸಂಬಂಧಪಟ್ಟ ಪಕ್ಷಗಳು’’ ವಿವಾದವನ್ನು ಸಂಧಾನದ ಮೂಲಕ ಶಾಂತಿಯುತವಾಗಿ ಪರಿಹರಿಸಿಕೊಳ್ಳುವುದು’’ ಎಂಬ ‘‘ವಿಶ್ವಾಸ’’ವನ್ನು ವ್ಯಕ್ತಪಡಿಸಿದೆ.
‘‘ಇತ್ತೀಚಿನ ವರದಿಗಳನ್ನು ಚೀನಾ ಗಮನಿಸಿದೆ. ಸಂಘರ್ಷದಲ್ಲಿ ಉಂಟಾಗಿರುವ ಸಾವು-ನೋವುಗಳ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಪ್ರಸಕ್ತ ಘಟನೆಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಭಾವಿಸಿದ್ದೇವೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ವಿದೇಶ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಕಾಶ್ಮೀರ ಇತಿಹಾಸದಿಂದ ಬಂದ ವಿವಾದವಾಗಿದೆ. ಈ ಬಗ್ಗೆ ಚೀನಾ ನಿಖರ ನಿಲುವೊಂದನ್ನು ಹೊಂದಿದೆ. ಸಂಬಂಧಪಟ್ಟ ಎಲ್ಲ ಪಕ್ಷಗಳು ಮಾತುಕತೆಗಳ ಮೂಲಕ ಶಾಂತಿಯುತವಾಗಿ ವಿವಾದವನ್ನು ಪರಿಹರಿಸಿಕೊಳ್ಳಬೇಕು’’ ಎಂದು ಕಾಶ್ಮೀರದಲ್ಲಿನ ಅಶಾಂತ ಪರಿಸ್ಥಿತಿಯ ಕುರಿತಂತೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.





